ಹಂಸವಾಹನಪಿತನೆ ಹಂಸಾ ಢಿಭಿಕವೈರಿ
ಕಂಸಮರ್ದನ ಶೌರಿ ಬಾ ಬಾ ಬಾ ಪ
ಸಾಸಿರನಾಮದೊಡೆಯ
ವಾಸವವಿನುತನೆ
ಲೇಸಾಗಿಸ್ತುತಿಸುವೆ _ಬಾ ಬಾ ಬಾ ಅ
ವೇದಾವಕದ್ದಂಥ
ಉದ್ದಂಡ ದೈತ್ಯನ
ಮರ್ಧಿಸಿ ವೇದವ ತಂದು
ವೇಧನ ಸಲಹಿದ
ಮುದ್ದು ಮೂರುತಿ ಮತ್ಸ್ಯ ಬಾ ಬಾ ಬಾ 1
ಸಿಂಧು ವಿನೊಳಗಿದ್ದ
ಮಂದರಗಿರಿಯನ್ನು
ಬಂದು ಬೆನ್ನಿಲಿಪೊತ್ತು
ತಂದು ಪೀಯೂಷವ
ಚಂದದಿ ಸಲಹಿದ
ಕೂರ್ಮಸ್ವರೂಪನೆ _ ಬಾ ಬಾ ಬಾ 2
ಕನಕನೇತ್ರನ ಕೊಂದು
ಕಾಂತೆಯಹಿಡಿದೆತ್ತಿ
ಕನಕಗರ್ಭನಿಗೊಲಿದ
ಕಾರುಣ್ಯನಿಧಿಚಂದ್ರ
ಕನಕವರ್ಣದ ಕ್ರೋಢ ಯಜ್ಞ ಸ್ವರೂಪನೆ _ ಬಾ ಬಾ ಬಾ 3
ತರುಳನಮೊರೆಕೇಳಿ
ದುರುಳನ ಕರುಳನೆ ಬಗೆದು
ಕೊರಳೊಳು ಕರುಳ ಧರಿಸಿ
ಸುರರನ್ನು ಪೊರೆದಂಥ
ಸರ್ವವ್ಯಾಪಿ ಕರುಣಿಯೆ
ನಾರಸಿಂಹ ಮೂರ್ತಿ _ ಬಾ ಬಾ ಬಾ 4
ಅನುಜನ ಪೊರೆಯಲು
ತನುವನು ಮರೆಸಿಕೊಂಡು
ದಾನವನು ಬೇಡುತ ಬಲಿ
ಯನು ತುಳಿದು ಪೊರೆದ
ಘನ್ನ ಮಹಿಮ ವಟು ವಾ
ಮನ ರೂಪಿಯೆ _ ಬಾ ಬಾ ಬಾ 5
ಕೊಡಲಿಯ ಪಿಡಿಯುತ
ಒಡೆಯರ ತರಿದು
ಕಡಿದು ಮಾತೆಯ ಪಿತ
ನುಡಿಯನು ಸಲಿಸಿದ
ಚಂಡವಿಕ್ರಮ ಮಹಿಮ
ಭಾರ್ಗವ ಮೂರುತಿ _ ಬಾ ಬಾ ಬಾ 6
ಕಾಂತೆಯನೆಪದಿಂದ
ಕದನವ ಹೂಡಿಕೊಂಡು
ಅಂತಕಸದನಕೆ
ಅರಿಗಳ ತಳ್ಳುತ
ಶಾಂತತೆ ಬೀರಿಪೊರೆದ
ದಶರಥ ರಾಮನೆ _ ಬಾ ಬಾ ಬಾ 7
ಚೋರತನದಿ ಬಲು
ಬೆಣ್ಣೆಯ ಮೆಲ್ಲುತ
ಜಾರತನದಿ ಋಷಿ
ಸ್ತ್ರೀಯರಿಗೊಲಿದಂಥ
ಮಾರಜನಕ ಶ್ರೀ
ರುಕ್ಮಿಣಿ ಕೃಷ್ಣ _ ಬಾ ಬಾ ಬಾ 8
ವೇದಗೋಚರ ವಿಶ್ವ
ವೇದ ಬಾಹ್ಯರಿಗೆಲ್ಲ
ವೇದ ವಿರುದ್ಧವಾದ
ವಾದಗಳ ತೋರಿ
ನಿಂದು ಬೆತ್ತಲೆ ಮೆರದ
ಬೌದ್ಧ ಸ್ವರೂಪನೆ _ ಬಾ ಬಾ ಬಾ 9
ಕಲಿಬಾಧೆ ಹೆಚ್ಚಾಗೆ
ಕಲಿಯುಗ ಕೊನೆಯಲ್ಲಿ
ಮಲಿನಾರ ಮರ್ಧಿಸಿ
ಉಳಿಸಲು ಧರ್ಮವ
ಚಲುವ ರಾಹುತನಾದ
ಕಲ್ಕಿ ಸ್ವರೂಪನೆ _ ಬಾ ಬಾ ಬಾ 10
ಸತ್ಯಸಂಕಲ್ಪನೆ ನಿತ್ಯಸ್ವರೂಪನೆ
ಉತ್ತಮನೀನೆಂದು
ಒತ್ತೊತ್ತಿ ಪೊಗಳುವೆ
ಭೃತ್ಯನು ನಿನ್ನವನು ಕಣ್ಣೆತ್ತಿ ನೋಡುತ _ ಬಾ ಬಾ ಬಾ11
ಏಕರೂಪನೆ ನಿನ್ನನೇಕ ರೂಪಂಗಳ
ಸಾಕಲ್ಯದಿಂದಲಿ ಶ್ರೀಕಾಂತೆ ಅರಿಯಳು
ಕಾಕುಮತಿಯು ನಾನು
ಎಂತು ವರ್ಣಿಸಲಯ್ಯ _ ಬಾ ಬಾ ಬಾ12
ಪೂರ್ಣಸ್ವರೂಪನೆ _ ಪೂರ್ಣ ಗುಣಾಬ್ಧಿಯೆ
ಪೂರ್ಣನಂದಾನೆ ಪೂರ್ಣ ಸ್ವತಂತ್ರನೆ
ಪೂರ್ಣಬೋಧರ ಪೂರ್ಣ
ಕರುಣಾವ ಬೀರಿಸು _ ಬಾ ಬಾ ಬಾ 13
ಮಾತುಮಾತಿಗೆ ನಿನ್ನ ನಾಮದಸ್ಮರಣೆಯ
ನಿತ್ತು ಪಾಲಿಸು ಎನ್ನ
ಮೃತ್ಯೋಪಮೃತ್ಯುವೆ ದೇವ
ಭಕ್ತಿಭಾಗ್ಯವನಿತ್ತು ಮನ್ನಿಸಿ ಸಲಹುತ _ ಬಾ ಬಾ ಬಾ 14
ದೋಷದೂರನೆ ನಿನ್ನ ದಾಸನುನಾನಯ್ಯ
ವಾಸವ ಜಯಮುನಿ ವಾತನೊಳ್ವಾಸಿಪ
ಈಶ ಸಿರಿಕೃಷ್ಣ ವಿಠಲರಾಯನೆ
ಬೇಗ ಬಾ ಬಾ ಬಾ 15
****