ಭಕುತವತ್ಸಲ ಶೀಲಾ-ಶೇಷಗಿರಿಯ ಲೋಲಾ ಪ
ನೀ ಕರುಣಿಸೊ ಎನ್ನಾ-ಕುಲಸ್ವಾಮಿ ಘನ್ನಾಅ.ಪ
ಮಂದಭಾಗ್ಯನು ನಾನು ವೃಂದಾರಕ ವಂದ್ಯ
ತಂದೆ ಎನಗೆಂದೆಂದು ಅನಿಮಿತ್ತಬಂಧೂ
ವಂದಿಪೆ ನಿನ್ನಯ ದ್ವಂದ್ವಪಾದದ ಧ್ಯಾನ ಅ-
ದೊಂದನಾದರು ಇತ್ತು ಬಂಧವ ಪರಿಹರಿಸೊ
ಹಿಂದೆ ನಿನ್ನಯ ನಾಮ ಒಂದೇ
ಬಂಧಹರಿಸಿತು ಭಕುತವೃಂದಕೆ
ಅಂದು ಅವರೇನೆಂದು ಕರೆದರೋ
ಮಂದರೋದ್ಧರ ಬಂಧಮೋಚಕ1
ಪಾಲಿಸೋ ಗೋಪಾಲ ಸೌಶೀಲ್ಯ ಗುಣಮಾಲಾಭರಿತ
ಓಲೈಪರೋ ಮುಕ್ತಜಾಲ ನಿನ್ನ
ಕಾಲನಾಮಕ ಆಪತ್ಕಾಲಬಾಂಧವನೆಂದು
ಕಾಲಿಗೆರಗುವೆ ಕೃಪಾಳು ನೀನಲ್ಲವೆ
ಸೊಲ್ಲಲಾಲಿಸೊ ಲಕುಮಿನಲ್ಲ ನೀ
ನಲ್ಲದಲೆ ಇನ್ನಿಲ್ಲವೆಂದಿಗೂ
ಬಲ್ಲಿದರಿಗತಿಬಲ್ಲಿದನು ಆ-
ವಲ್ಲಿ ನೆನೆದರೆ ಅಲ್ಲೇ ಪೊರೆವೆ 2
ಪುರಾಣಪುರುಷನೆ ಪರಮ ಕರುಣಿ ಎಂದು
ಪುರಾಣದೊಳು ನೀನೆ ಪ್ರತಿಪಾದ್ಯನೊ
ಕರಿ ಧ್ರುವ ಭೃಗು ಭೀಷ್ಮರ ಚರಿತೆಯ ನೋಡಲು
ಹರಿ ನಿನ್ನ ಸರಿಯುಂಟೆ ದುರಿತಾಪಹಾರದಿ
ಸ್ಮರಿಪರಘ ಪರಿಹರಿಪ ಶ್ರೀಪ
ಸುರಪಹರಮುಖವಿಬುಧವಂದ್ಯ
ದರಸುದರ್ಶನಧಾರಿ ಶ್ರೀ ವೇಂಕಟೇಶಉರುಗಾದ್ರಿವಾಸ ವಿಠಲಾ 3
****