ankita ತಂದೆವೆಂಕಟೇಶವಿಠಲ
ರಾಗ: ಶ್ರೀರಂಜಿನಿ ತಾಳ: ಝಂಪೆ
ರಾಘವೇಂದ್ರ ಮಹಾನುರಾಗದಲಿ ಪೊರೆ ಸತತ
ಬಾಗಿ ನಮಿಸುವೆನಯ್ಯ ಪಿಡಿ ಎನ್ನ ಕೈಯ್ಯ ಪ
ಯೋಗೀಂದ್ರ ತ್ವಚ್ಚರಣಪರಾಗಮಧುಕರನೆನಿಸಿ
ಬೇಗ ಸೂಚಿಸೊ ಹಾದಿ ವಿತತದಯವನಧೀ ಅ.ಪ
ನಾವಿಕನ ಬಿಟ್ಟು ವಿಕರ್ಮಕಾವಳದಿ ನೆಲೆಗಾಣ-
ದವಿರತಾಶ್ರುಗಳಿಂದ ವಿವಿಧ ಭಯದಿ
ಕವಿವ ದುಷ್ಟಷಡೂರ್ಮಿ ಭವಜಲಧಿತೆರೆಗಳೊಳು
ಬವಣೆ ಪಡುವುದನರಿಯ ದಯಾದ್ರ್ರಹೃದಯ 1
ದಣಿದಣಿದು ಕಂಡವರ್ಗೆ ಮಣಿದು ಮೂರ್ಖತೆಯಿಂದ
ಕ್ಷಣದೊಳಣುಗಾಲ ಹರಿ ಗುಣ ವಿವೇಚಿಸದೆ
ಉಣುವ ದುಷ್ಪಲಗಳಿಗೆ ಎಣೆಗಾಣದಾದೆ ನಿ-
ನ್ನಣುಗನೆಂದೆನ್ನ ಪೊರೆ ಪ್ರಣತಾರ್ತಿ ಹರನೇ 2
ಅಕುಟಿಲರ ದೈವ ತಂದೆವೆಂಕಟೇಶವಿಠಲ ಸಾ-
ತ್ವಿಕರ ಸಲಹಲ್ಕೆ ನಿನ್ನೊಳಿರುತಿರಲೂ
ಸುಖದಾಸೆಯಿಂದಹಿಕ ನಿಕರದಲಿ ಮೈಮರೆದು
ಪ್ರಕಟಭವನಾಟಕದಿ ವಿಕಟನಾದೆ 3
***
ಕಾವಳ=ಕತ್ತಲೆ; ಅವಿರತಾಶ್ರು=ನಿಲ್ಲದ ಕಣ್ಣೀರು;
ಷಡೂರ್ಮಿ=ಆರುತೆರೆಗಳು-ಹಸಿವು, ನೀರಡಿಕೆ, ಶೋಕ,
ಮೋಹ, ವಾರ್ಧಕ್ಯ, ಮರಣ; ದಯಾರ್ದ=ದಯೆಯಿಂದ
ತೋಯಿದ (ಒದ್ದೆಯಾದ); ನಿನ್ನಣುಗ=ನಿನ್ನಮಗ-ಭಕ್ತ;
ಪ್ರಣತಾರ್ಥಿಹರ=ಶರಣಾಗತರಾದವರ ಕಷ್ಟ ನಿವಾರಕ;
ಅಕುಟಿಲ=ದೋಷವಿಲ್ಲದವ; ವಿಕಟ=ಹಾಸ್ಯಗಾರ-ಛಿಟoತಿಟಿ;