by yadugiriyamma
ಶ್ರೀರಂಗನಾಥ ನಂಬಿದೇ ನಿನ್ನ ನಾನೇ ಅನಾಥ ಪ
ಅನಾಥರಕ್ಷಕ ಎನ್ನಾ ಪ್ರೀತಿಯಿಂದಲೆ ಕಾಯೊ ಲೋ
ಕನಾಥನೆಂದು ಬಂದು ನಂಬಿದೆ ನಿನ್ನ ಅ.ಪ
ನಿಮ್ಮ ರಘುಪತಿ ನಿಮ್ಮ ವಿಭೀಷಣಗೆ ಕೊಡಲು
ತಾಮುನ್ನಾ ಶ್ರೀರಂಗಕ್ಷೇತ್ರದಿ ನೆಲಸಿ ಸಂತೋಷದಿ
ಧರ್ಮವರ್ಮಾದಿ ಚೋಳೇಂದ್ರ ಪೂಜಿತಪಾದ 1
ಕಂದ ಪ್ರಹ್ಲಾದ ಕರೆಯೆ ಕಂಬದಿಂದಲೆ ಬೇಗ
ಬಂದು ಅವನ ತಂದೆಯನು ಸಂಹರಿಸಿದೆ
ಕಂದನ ಕಾಯ್ದ ಗೋವಿಂದ ರಕ್ಷಿಸೊ ಎನ್ನ 2
ಅಜಮಿಳ ಕರೆಯೆ ಆಪತ್ತಿಗೆ ಬಂದು ನೀನೊದಗೆ
ನಿಜಸ್ಮರಣೆ ಮಾತ್ರದಲವನ ದುರಿತವೆಲ್ಲವ ಕಳೆದು
ನಿಜ ಪಾದವನಿತ್ತೆ ಕರುಣದಿಂದಲೆ ರಂಗ 3
ಕಂದ ಧ್ರುವ ತಾನು ಅಡವಿಯಲಿ ನಿಂತು ತಪವನು
ಚಂದದಿ ಮಾಡಲು ಬಂದು ಸೇವೆಯನಿತ್ತೆ ಆ
ನಂದಪದವನಿತ್ತ ಸುಂದರಾಯನೆ ನೀನು 4
ಅರ್ಕಸುತನಾಗ ನಿಮ್ಮನ್ನು ಸೇರಿ ಸೌಖ್ಯವ ಬೇಗ ಮಾಡೆ
ಸೊಕ್ಕಿದ ವಾಲಿಯನೊಂದು ಬಾಣದಿಂ ಕೊಂದು
ಮರ್ಕಟಗೆ ರಾಜ್ಯವನಿತ್ತ ರಂಗಯ್ಯ ನೀನು5
ಮಕರಿ ಕಾಲ್ಪಿಡಿಯೆ ಮತಂಗಜ ನಿಮ್ಮನು ಕರೆಯೆ
ನಕ್ರವ ಕೊಂದು ಚಕ್ರದಿ ಅತಿವೇಗದಿಂ ಕರಿಯ
ರಕ್ಷಿಸೆ ಬಂದೆ ಕರುಣದಿಂದೆ 6
ಭವಕೆ ನಾ ಬೆದರಿ ಬಂದೆನೊರಂಗ ಕಾಯೋ ನೀ
ಭವದಿ ಈಶಣತ್ರಯವನ್ನು ಬಿಡಿಸಿ ನಿನ್ನಯ ಪಾ
ದವಾಸವ ಮಾಡಿಸೊ ವಾಸುಕಿಶಯನನೆ 7
ಆರುಜನ ಕಳ್ಳರು ಎನ್ನಲಿ ಸೇರಿ ಬಾಧಿಸುತಿಹರು
ದೂರಮಾಡವರನ್ನು ಸೇರಿಹೃದಯದಲ್ಲಿ
ಶ್ರೀನಿವಾಸನೆ ನಿಮ್ಮ ಪಾದದೊಳಿರಿಸೆನ್ನ 8
****