Showing posts with label ನೀರಾಟವ ನೋಡಿದೆ ನೀರಜಾಕ್ಷನ ರಾಣಿ venkatakrishna. Show all posts
Showing posts with label ನೀರಾಟವ ನೋಡಿದೆ ನೀರಜಾಕ್ಷನ ರಾಣಿ venkatakrishna. Show all posts

Tuesday, 1 June 2021

ನೀರಾಟವ ನೋಡಿದೆ ನೀರಜಾಕ್ಷನ ರಾಣಿ ankita venkatakrishna

 by yadugiriyamma 

ಆಳ್ವಾರ್-ಆಚಾರ್ಯ ಸ್ತುತಿಗಳು

ನೀರಾಟವ ನೋಡಿದೆ ನೀರಜಾಕ್ಷನ ರಾಣಿ ಗೋದಾದೇವಿಯ ಪ


ಶ್ರೀವಿಲ್ಲಿಪುತ್ತೂರ ಶ್ರೀತುಳಸಿವನದಲ್ಲಿ

ಶ್ರೀವಿಷ್ಣುಚಿತ್ತರಾ ಪುತ್ರಿಯೆಂದೆನಿಸಿ ಸುಪುತ್ರಿಯೆಂದೆನಿಸಿ ಶ್ರೀ

ದೇವಿ ತಾನುದಿಸೆ ಬೇಗ

ತೀವ್ರ ಹರುಷದಿಂ ಬೆಳೆಯುತ್ತಲಿದ್ದಾಳಲು 1

ಪುತ್ರಿಗೆ ತಕ್ಕಂಥ ವರವಿಲ್ಲವೆನುತಾಲೆ

ಚಿತ್ತದೊಳಗೆ ಯೋಚಿಸಿದ ಆಳ್ವಾರರು ಪೆರಿಯಾಳ್ವರರು

ಭಕ್ತವತ್ಸಲನಾ ವರಿಸಬೇಕೆನುತಾನೆ

ಅರ್ಥಿಯಿಂದಲೆ ನೀರಾಟವನೆನೆದಾಳು 2

ವೇಷದಿ ಗೋಕುಲದೊಳಗಿದ್ದ

ಶ್ರೀಶವಾಸನೆಗಳ ಭಾವಿಸೀ | ಗೊಲ್ಲ ವಾಸನೆಗಳ ಭಾವಿಸೀ

ವಾಸುದೇವನಾ ವರಿಸಬೇಕೆನುತಾಲೆ ಉ

ಲ್ಲಾಸದಿಂದಲೆ ಹೆಂಗಳ ಕೂಡೆ ಪೊರಟಾಳು 3

ಮುತ್ತು ಮಾಣಿಕದಾಭರಣವನಿಟ್ಟು

ಸುತ್ತೆಣೆ ಗಂಟನ್ಹಾಕಿ ದೇವಿ ಸುತ್ತೆಣೆ ಗಂಟನ್ಹಾಕಿ

ಉತ್ತಮನಾಗಿದ್ದ ಪುಷ್ಪಗಳನೆ ಮುಡಿದು

ಚಿತ್ತದೊಳೊಲ್ಲಭನಪ್ಪಣೆಗೊಂಡು ಪೊರಟಾಳು 4

ಮಾರ್ಗಶಿರ ಮಾಸದಿ ಪೊತ್ತೊಂದು ದಿವಸಾದಿ

ಬೇಗ ತಾ ಪೊರಟೂ ಮಹಾಲಕ್ಷಿ ತಾ ಪೊರಟ

ಳಾಗ ಬೀದಿಯನು ಸುತ್ತಿ ಮಂಟಪದಲಿ ನಿಂದು

ಮಂಗಳಾರತಿಯನೆತ್ತೀ ಮಾರು ವಸ್ತ್ರವ ತೆಗದಾರು 5

ದಂತಧಾವನ ಮಾಡಿ ಕಂತುಪಿತನರಸೀಗೆ

ಅಂತರಂಗದ ಭಕ್ತರು ಬೇಗ ಅಂತರಂಗದ ಭಕ್ತರು

ಸಂತೋಷದಿಂದಲೆ ಮುಖವನ್ನು ತೊಳೆದು ಶ್ರೀ

ಕಾಂತಗೆ ವಸ್ತ್ರದಿಂ ಮುಖವನೊರೆಸಿದಾರು 6

ಭಾಪು ಛತ್ರಿಚಾಮರ ಸೂರೆಪಾನವಾ ಜನ ಬೀಸಿ

ಗೋಪಿ ಮುಕ್ತಿದಾಯಕಿಗಾಗ ಮುಕ್ತಿದಾಯಕಿಗಾಗ

ದರ್ಪಣವನು ತೋರಿ ಕಂದರ್ಪನ ಮಾತೆಗೆ

ಧೂಪ ದೀಪ ಕರ್ಪೂರದಾರತಿಯೆತ್ತಿದರು 7

ಬೇಗಾದಿಲಕ್ಷಿಗೆ ಆಭರಣ ಸಡುಲಿಸಿ

ಆಗ ಮುಡಿಯ ಬಿಚ್ಚಿ ದೇವೀಗೆ ಆಗ ಮುಡಿಯ ಬಿಚ್ಚೀ

ಬೇಗಾದಿಂ ಕಂಮೆಣ್ಣೆ ಕಸ್ತೂರಿತೈಲ

ಮೈಗೆ ತಾಳಮೇಳದ ಗತಿಯಿಂದಲೊತ್ತಿದ್ದರೂ 8

ಶ್ವೇತವರ್ಣದ ದಿವ್ಯ ನಾಗವಲ್ಲಿಗಳಿಂದ

ಖ್ಯಾತಿ ಪಡೆದಿರುವಾ ಕ್ರಮುಕಾ ಬೇಗ ಖ್ಯಾತಿ ಪಡೆದಿರುವಕ್ರಮುಕಾ

ನೂತನವಾದ ಕರ್ಪೂರವರ್ಣಗಳಿಂದ ಜಗ

ನ್ಮಾತೆಗೆ ತಾಂಬೂಲವ ನೀಡಿದರೂ 9

ಚಿಣ್ಣವಾರಾಂಗನೆಯರೆಲ್ಲ ರಾಗದಿ ಪಾಡೆ

ಸಣ್ಣವಾದ್ಯದೊಳಗೆ ನುಡಿಸೇ ಬೇಗ ವಾದ್ಯದೊಳಗೆ ನುಡಿಸÉೀ

ಹಣೆಯೊಳಗೆ ಬಾಚಿ ಮಣಿಗಂಟನಿಕ್ಕಿ ಉಳಿದ

ಎಣ್ಣೆ ಭಕ್ತರಿಗೆಲ್ಲ ಯಿತ್ತಾರು 10

ಮಿಂದು ಮಡಿಯನುಟ್ಟು ಚಂದದಿಂದಲೆ ದೇವಿ

ತಂದ ನೈವೇದ್ಯವುಂಡೂ ಬೇಗ ನೈವೇದ್ಯವುಂಡು

ಬಂದ ಭಕ್ತರಿಗೆಲ್ಲ ತೀರ್ಥಪ್ರಸಾದವಿತ್ತು

ಮಂದಗಮನೆ ತನ್ನ ಮಂದಿರಕೆ ನಡೆದಾಳು 11

ಬೈತಲೆಗೆ ರಾಗಟೆ ಹೆರಳಿಗೆ ಭಂಗಾರಗೊಂಡೆಯವ

ನಿತ್ತು ಪಾನುಪಟ್ಟಿಯು ಮುತ್ತಿನಬಟ್ಟೆ ಕಟ್ಟಿ ಬೇಗ ಮುತ್ತಿನಬಟ್ಟೆ ಕಟ್ಟಿ

ಕತ್ತುರಿ ಬಾವುಲಿ ಕಮಲಸರಗಳೂ

ಮುತ್ತಿನ ಮೂಗುತಿ ಮುಕುರಾವನಿಟ್ಟಳೂ 12

ಹಾರಪದಕ ಹಸ್ತಕಡಗ ಹರಡಿ ವಂಕಿ

ಶೀರೆಕುಪ್ಪಸ ತೊಟ್ಟೂ ಬೇಗ ಶೀರೆಕುಪ್ಪಸ ತೊಟ್ಟು

ತೋರ ಕುಂದಣದೊಡ್ಯಾಣ ಅಂದುಗೆ ಗೆಜ್ಜೆಯ

ಇಂದೀರಾದೇವಿ ತಾನಿಟ್ಟು ಬಂದಳು ಆಗಾ 13

ಭಾಷ್ಯಕಾರರು ಮೊದಲಾದ ಭಕ್ತರುಯೆಲ್ಲ

ಲಕ್ಷ್ಮಿದೇವಿಗೆ ಆಗ ಭಾಗ್ಯಲಕ್ಷ್ಮಿಗೆ ಆಗಾ ಭಾರಿ

ಯಾ ಶೀರೆ ಕುಪ್ಪುಸವನಿತ್ತು

ಪುಷ್ಪ ಮರ್ಯಾದೆಗಳ ಮಾಡೀ ಕರೆತಂದರು ಬೇಗಾ 14

ಮಂದಗಮನೆ ಅಂದು ಗೋವಿಂದನ ಎದುರಲ್ಲಿ ಆ

ನಂದದಿಂದಲೆ ಕುಳಿತೂ ಬೇಗ ಆನಂದದಿಂದಲೆ ಕುಳಿತು

ಚಂದದಿಂ ಮಲ್ಲಿಗೆಮಾಲೆಯ ಕಳುಹಲು

ಮಂದರೋದ್ದರ ತನ್ನಾ ಮಡಿದೀಗೆ ಕಳುಹಿದ 15

ಕೂಡಾರವಲ್ಲಿಯೆಂತೆಂಬೊ ದಿವಸದಲ್ಲಿ

ಕೂಡಿ ಮನ್ನಾರುರಂಗನಾ ಬೇಗ ಮನ್ನಾರುರಂಗನಾ

ಮಾಡಿದರು ಮೃದುಳ ಕ್ಷೀರಾನ್ನ ಭೋಜನಂಗಳ

ಮಾಡಿದರು ಭೋಗಿಯ ದಿನದಿ ಕಲ್ಯಾಣವ 16

ಮಕರ ಸಂಕ್ರಾಂತೀಲಿ ಮಂದರೋದ್ದಾರ ಸಹಿತ

ಚೊಕ್ಕ ಪಲ್ಲಕ್ಕಿಯೇರಿ ಬೇಗ ಚೊಕ್ಕ ಪಲ್ಲಕ್ಕಿಯೇರಿ

ಪಕ್ಕ ಮೆರವಣಿಗೆಯಲಿ ಬಂದು ಹರುಷದಿಂದ

ವೆಂಕಟಕೃಷ್ಣನ ಎಡದಲ್ಲಿ ಕುಳಿತಾಳು 17

***