ರಾಗ: [ಶಂಕರಾಭರಣ] ತಾಳ: [ಮಿಶ್ರನಡೆ]
ಸೋಜೀಗರೊಳಗತಿ ಸೋಜೀಗ ರಾಘವೇಂದ್ರಾ ಗುರು ಪ
ಸೋಜೀಗವಲ್ಲವೆ ರಾಜಾ ಗುರುವು ನೀನು
ನೈಜರೂಪದಿ ಬಂದು ಮಾಜಾದೆ ಪೊರೆವುದು ಅ.ಪ
ಬೆಂಬಲ ನಿನಗೆಂದು ಸ್ತಂಭದಿ ಹರಿಬಂದ
ಬೆಂಬಲ ನೀ ನಮಗೆ ಇಂಬುಪಾಲಿಸು ಗುರುವೇ
ನಂಬೀದ ಜನಗಣ ಡಿಂಭದಿ ನೀ ಮೂಡಿ
ಹಂಬಲವಳಿಪುದು ಅಂಬಕದೊಳು ಕಂಡೇ 1
ಇಲ್ಲ ಹರಿಯು ಎಂಬ ಕ್ಷುಲ್ಲಸಂಶಯವೆಂಬ
ಹಲ್ಲುಮುರಿದು ಭಕ್ತರಲ್ಲಿ ತುಂಬುವೆ ಭಕ್ತಿ
ಇಲ್ಲದಿರಲು ನೀನು ಕಳ್ಳ ಕಲಿಯು ಜಗ-
ವೆಲ್ಲ ತುಂಬುತ ಶೃತಿ ಸುಳ್ಳು ಎನಿಸುತಿದ್ದಾ 2
ನಿರುತನೀಡುತ ಹರಿಕೆ ಕರೆದು ಪೊರೆವೆ ಜನರ
ಸರಿಯು ಕಾಣೆನು ನಿನಗೆ ಹರಿಯ ಕಿಂಕರ ಶರಣು
ಮರುತದೇವನಮತ ಮೆರೆಸಿ ಕುಣಿಸುತ್ತಿರುವೆ
ಶರಣಜನರ ಪೊರೆವ ಪರಮಾಪ್ತಸಿದ್ಧವೋ 3
ಹುಣ್ಣು ಅಳಿಸಿ ಭಕ್ತಿ ಹಣ್ಣು ತಿನ್ನಿಸಿ e್ಞÁನ
ಕಣ್ಣು ಪಾಲಿಪ ಗುರು ಮಣ್ಣುಗೂಡಿಸೊ ಭವವ
ಸಣ್ಣವರೆಮ್ಮ ಶಂಕುಕರ್ಣನೆ ಸಲಹೈಯ್ಯ
ಗಣ್ಯರೊಳಗೆಗಣ್ಯ ಪೂರ್ಣಪ್ರಜ್ಞರಪ್ರೀಯಾ 4
ಹಿಂದೆ ಹೋಯಿತು ಹೊತ್ತು ಮುಂದೆ ಕಾದಿದೆ ಮೃತ್ಯು
ಇಂದು ಭಾರವ ಪೊತ್ತು ಕಂದರೆಮ್ಮನು ಕಾಯೋ
ಇಂದ್ರತಾತನ ಹೃದಯಮಂದೀರದಲಿ ನಲಿವ
ಇಂದಿರೇಶ ಕೃಷ್ಣವಿಠಲರಾಯನ ತೋರು 5
***