Showing posts with label ಯಮ ತನ್ನ ಪುರದಿ ಸಾರಿದನು ಎಮ್ಮ ಕಮಲನಾಭನ achalananda vittala. Show all posts
Showing posts with label ಯಮ ತನ್ನ ಪುರದಿ ಸಾರಿದನು ಎಮ್ಮ ಕಮಲನಾಭನ achalananda vittala. Show all posts

Monday 2 August 2021

ಯಮ ತನ್ನ ಪುರದಿ ಸಾರಿದನು ಎಮ್ಮ ಕಮಲನಾಭನ ankita achalananda vittala

ಯಮ ತನ್ನ ಪುರದಿ ಸಾರಿದನು

ಎಮ್ಮ ಕಮಲನಾಭನ ದಾಸರ ಮುಟ್ಟದಿರಿಯೆಂದು ಪ.


ಭುಜದಲೊತ್ತಿದ ಶಂಖಚಕ್ರಾಂಕಿತವನ್ನು

ನಿಜ ದ್ವಾದಶನಾಮ ಧರಿಸಿಪ್ಪರಾ

ತ್ರಿಜಗವಂದಿತ ತುಲಸಿಯ ಮಾಲೆ ಹಾಕಿದ

ಸುಜನರಂಗಣವ ಪೊಗದೆ ಬನ್ನಿರೆಂದು 1


ಗೋಪಿಚಂದನ ಬಿಟ್ಟು ದೇಹಕ್ಕೆ ಭಸ್ಮವ

ಲೇಪಿಸಿ ಹರಿಹರರೊಂದೆಂಬ

ಪಾಪಿಗಾಳೆಳತಂದು ಕಣ್ಣು ಕಳಚಿ ಅಂಧ

ತಾಮಸಿನೊಳಗ್ಹಾಕಿ ಕಲ್ಲು ದಬ್ಬಿರೊ ಎಂದು 2


ತಾಳದಂಡಿಗೆ ನೃತ್ಯಗೀತ ಸಮ್ಮೇಳದಿ

ಊಳಿಗವನು ಮಾಳ್ಪ ಹರಿದಾಸರ

ಕೇಳುತಲೊಮ್ಮೆ ಕರಗಳ ಮುಗಿದು ನ -

ಮ್ಮಾಳುಗಳೆನುತ ಪೇಳದೆ ಬನ್ನಿರೆಂದು 3


ಗುರುಮುದ್ರೆಯವನು ತಾನೆಂದು ಪ್ರಾಣಿಗಳ ಮಂ-

ದಿರಕೆ ಪೋಗಿ ಪೋಗಿ ನಿರ್ಬಂಧಿಸಿ

ಬರಿದೆ ಬೈದು ಬಳಲಿಸುವ ಪಾಪಿಗಳ

ಕೊರೆದು ಕುಟ್ಟಿತಂದು ಮುರಿದು ಕೊಲ್ಲಿರೊ ಎಂದು 4


ಅನ್ಯದೈವ ಅನ್ಯಮಂತ್ರ ತಂತ್ರವ ಬಿಟ್ಟು

ಪನ್ನಗಶಯನನೆ ಗತಿಯೆನುತ

ಉನ್ನತ ಹರಿದಿನ ವ್ರತವನಾಚರಿಪ ಪ್ರ-

ಸನ್ನರ ಗುಣವ ಕೆಣಕದೆ ಬನ್ನಿರೆಂದು 5


ಚರ್ಮಕ್ಕೆ ಸಿಡಿ ಊರಿ ಬೇವಿನುಡುಗೆವುಟ್ಟು

ಚಿಮ್ಮುತ ಚೀರುತ ಬೊಬ್ಬೆಗಳಿಡುತ

ಕರ್ಮ ಕೂಗುರಿಯಾಗಿ ಪ್ರಾಣಹಿಂಸೆಯ ಮಾಳ್ಪ

ಬ್ರಹ್ಮೇತಿಕೋರನ ಬ್ಯಾಗನೆ ಎಳತನ್ನಿ 6


ಕೇಶವ ಹರಿ ಅಚಲಾನಂದವಿಠಲನ್ನ

ಶೇಷಗಿರಿಯ ತಿರುಮಲೇಶನ

ದಾಸರ ದಾಸರ ದಾಸನೆಂದೆನಿಸುವ

ದಾಸರ ಗುಣವ ಕೆಣಕದೆ ಬನ್ನಿರಿ ಎಂದು 7

****