ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರೋ ಬಾರೋ ಬಾರಯ್ಯ ಬಾರೊ ಸದ್ಗುರುಸ್ವಾಮಿ ಬಾರಯ್ಯ ಬಾರೊ ಮದ್ಗುರು ಸ್ವಾಮಿ ಬಾರಯ್ಯ ಬಾರೊ ಪ
ಸ್ವರೂಪಸುಖ ನಿಜವನ್ನು ತೋರೊ ಹರುಷಾನಂದದನುಭವ ಬೀರೊ ಗುರುತವಾಗ್ಯೆನ್ನೊಳು ನಿತ್ಯವಿರೊ ತರಣೋಪಾಯದ ನಿಜಬೋಧ ನೀ ಸಾರೊ 1
ಕಣ್ಣುಕೆಂಗೆಂಡುತಾವೆ ಕಾಣದೆ ನಿಮ್ಮ ಪುಣ್ಯಚರಣ ತೋರೊ ಘನ ಪರಬ್ರಹ್ಮ ಚಿಣ್ಣಕಿಂಕರ ಅತಿದೀನ ನಾ ನಿಮ್ಮ ಧನ್ಯ ಧನ್ಯಗೈಸುವದೆನ್ನ ಜನುಮ 2
ಚಾಲ್ವರುತಾವೆ ಮನೋರಥಗಳು ಆಲೇಶ್ಯ ಮಾಡದಿರು ನೀ ಕೃಪಾಳು ಮೇರೆದಪ್ಪಿ ಹೋಗುತಿದೆ ದಿನಗಳು ಬಲು ಭಾಗ್ಯೊದಗಿಬಾಹುದು ನೀ ದಯಾಳು 3
ಹಾದಿ ನೋಡುತಿದೆ ಹೃದಯ ಕಮಲ ಸಾಧಿಸಿಬಾಹುದು ಮುನಿಜನ ಪಾಲ ಸಾಧುಹೃದಯ ನೀನಹುದೊ ಸಿರಿಲೋಲ ಛೇದಿಸೊ ನೀ ಬಂದು ಭವಭಯಮೂಲ 4
ಬಾರದಿದ್ದರೆ ಪ್ರಾಣ ನಿಲ್ಲದೊ ಎನ್ನ ಕರುಣಿಸಿಬಾಹುದು ಜಗನ್ಮೋಹನ ತರಳ ಮಹಿಪತಿಗೆ ನೀ ಜೀವಜೀವನ ಕರೆದು ಕರುಣ ಮಳೆಗೈಸು ಪಾವನ 5
***