Showing posts with label ಬಿಡು ಬಿಡು ದೇಹವ vijaya vittala ankita suladi ಉಪಾಸನಾ ಸುಳಾದಿ BIDU BIDU DEHAVA UPASANA SULADI. Show all posts
Showing posts with label ಬಿಡು ಬಿಡು ದೇಹವ vijaya vittala ankita suladi ಉಪಾಸನಾ ಸುಳಾದಿ BIDU BIDU DEHAVA UPASANA SULADI. Show all posts

Sunday, 29 November 2020

ಬಿಡು ಬಿಡು ದೇಹವ vijaya vittala ankita suladi ಉಪಾಸನಾ ಸುಳಾದಿ BIDU BIDU DEHAVA UPASANA SULADI

 

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಉಪಾಸನಾ ಸುಳಾದಿ 

( ಧ್ಯಾನೋಪಾಸನೆ ಮುಖ್ಯವಾದುದು ಎಂದು ದಾಸಾರ್ಯರು ಈ ಸುಳಾದಿಯಲ್ಲಿ ಹೇಳಿದ್ದಾರೆ ) 


 ರಾಗ ಶಂಕರಾಭರಣ 


 ಝಂಪಿತಾಳ 


ಬಿಡು ಬಿಡು ದೇಹವ ದಂಡಿಸಿ ಮಾಡಿದ ಕರ್ಮ

ಕೊಡತಕ್ಕವಲ್ಲವವು ದೃಢವಾದ ಪದವಿಗಳು

ಕಡು ಸಾಹಸವ ಬಟ್ಟುನೆಸಗಿದರೆ ಸ್ವರ್ಗಾದಿ

ಒಡನೆ ತಿರುಗಿಸಿ ಫಲ ಪುಡಿಯಾಗಿ ಪೋಗುವದು

ಮಿಡುಕುವದೆ ಸಿದ್ಧ ಶತಕಲ್ಪ ಮಾಡಿದರನ್ನ

ನುಡಿಗೆ ಸಂಶಯ ಸಲ್ಲ ಕೇಳಿ ಮರುಳಾಗದಿರಿ

ಪಡಿ ಇಲ್ಲದಾ ದಾರಿ ತೋರುವರು ಹಿರಿಯರು

ದೃಢನಾಮ ವಿಜಯವಿಟ್ಠಲನ ಶ್ರವಣ ಮನನ

ಅಡಿಗಡಿಗೆ ಲಾಲಿಸಿ ಪಡಿಯೋದು ಧ್ಯಾನಾ ॥ 1 ॥ 


 ಮಟ್ಟತಾಳ 


ಧ್ಯಾನಾದೊಳಗೆ ಸ್ನಾನವಡಕಾ

ಧ್ಯಾನಾದೊಳಗೆ ಮೌನವಡಕಾ

ಧ್ಯಾನಾದೊಳಗೆ ದಾನವಡಕಾ

ಧ್ಯಾನಾದೊಳಗೆ ಮಾನವಡಕಾ

ಧ್ಯಾನಾದಿಂದ ಜ್ಞಾನವುಂಟು

ಧ್ಯಾನಾದೊಳಗೆ ಜಗವಡಕಾ

ಧ್ಯಾನಾದೊಳಗೆ ದೇವರಡಕಾ

ಧ್ಯಾನಾದೊಳಗೆ ಸರ್ವಾ ಅಡಕಾ

ಧ್ಯಾನಾವನ್ನು ಗಳಿಸಿಕೊಂಡು

ಧನ್ಯ ವಿಜಯವಿಟ್ಠಲನ್ನ 

ಧ್ಯಾನವನ್ನು ಮಾಡು ನಿ -

ದಾನದಿಂದ ಭಕುತಿಯಲ್ಲಿ 

ಧ್ಯಾನವನ್ನು ಬಿಟ್ಟ ನರಗೆ

ಏನು ಇರಲಿ ಎಲ್ಲ ವಡಕಾ ॥ 2 ॥ 


 ರೂಪಕತಾಳ 


ಧ್ಯಾನರಹಿತನಾದ ಮನುಜ -

ರೇನು ಕರ್ಮವ ಮಾಡಲೇನು

ಆನೆ ಕಪಿತ್ಥ ನುಂಗಿದಂತೆ

ಹೇನು ಬಿಡದೆ ವಾಸನೀಯ

ತಾನು ನಿರುತಾಶ್ರೈಸಿದಂತೆ

ಜಾಣನೊಬ್ಬ ಕಿನ್ನರಿ ಧರಿಸಿ

ಕೋಣನಲ್ಲಿ ಮೀಟಿದಂತೆ

ಗಾಣದೊಳಗೆ ಮಳಲು ತುಂಬಿ

ಭಾನು ಮುಣಗಿ ಸುತ್ತಿದಂತೆ ಕಾಣಿರೊ

ಧ್ಯಾನ ಜ್ಞಾನ ಸಂಗತಿಯಿಂದ

ವಾನರನ್ನ ಮುಷ್ಟಿಯಂತೆ

ದೀನನಾಗಿ ಒಂದು ನಿಮಿಷಾ

ಧ್ಯಾನವನ್ನು ಮಾಡಲು

ಶ್ರೀನಿವಾಸ ವಿಜಯವಿಟ್ಠಲ 

ಆನಂದವಾಗಿ ಒಲಿವನು

ಧ್ಯಾನದಿಂದ ಗತಿಗೆ ಸೋ -

ಪಾನವಾಗಲಿ ವಿರಚಿಸೂ ॥ 3 ॥ 


 ಧ್ರುವತಾಳ 


ಅನಂತ ಕಲ್ಯಾಣ ಗುಣಪರಿಪೂರ್ಣ 

ನಿತ್ಯನಿರ್ದೋಷಾ ಜ್ಞಾನಾನಂದಾತ್ಮಕ 

" ವಿಷ್ಣುರ್ಮೇಸ್ವಾಮಿ "  ತ್ರಿಲೋಕ ಕರ್ತಾ

ನೀನೆ ಸ್ವತಂತ್ರ ಬೊಮ್ಮಾದಿಗಳು ನಿನ್ನ ದಾಸಾನುದಾಸರು

ಅನಂತಾನಂತ ಕಾಲದಲ್ಲಿ ನಿಜವೆಂದು ಪೇಳುತ್ತ

ಮಾನುಷೋತ್ತಮ ಹೀಗೆ ಬಲುಕಾಲವರ್ಚಿಸಲು

ಮನದೊಳಗೆ ವಿಜಯವಿಟ್ಠಲನು ಕೃಪೆಯಿಂದ

ಧ್ಯಾನಕೆ ಪೊಳೆವಾ ॥ 4 ॥ 


 ತ್ರಿವಿಡಿತಾಳ 


ಚತುರ ಗುಣದಲ್ಲಿ ಚತುರ ಸಾಸಿರ

ಚತುರ ನೂರು ವರುಷ ಧ್ಯಾನಂಗಳ

ಚತುರದಿಂದಲಿ ಮಾಳ್ಪ ಮತಿಗೆ ದೇಮೋತ್ತಮ

ಚತುರವೇದ ವಿಜಯವಿಟ್ಠಲನು 

ಚತುರನಾಗಿ ಬಿಂಬ ಮೂರುತಿ ಸುಳಿದು

ಚತುರತನದಲ್ಲಿ ಬಂದು ಚರಿಸುವನು ॥ 5 ॥ 


 ಅಟ್ಟತಾಳ 


ಹೊನ್ನೆ ಹುಳುವಿನಂತೆ ಕಣ್ಣಿಗೆ ಸುಳಿವನು

ತನ್ಮಯ ಗುಣನಿಧಿ ತನ್ನಾಮಕ ದೇವ

ತನ್ನಿಚ್ಛೆ ಸ್ವಭಾವ ಮುನ್ನೆ ಧ್ಯಾನದಲ್ಲಿ

ಜನ್ನಿತ ಜ್ಞಾನಕ್ಕೆ ಮನ್ನಿಸುವನು ಇವನ

ಮುನ್ನಿನ ಮಾರ್ಗಕ್ಕೆ ಮಾನ್ಯ ವಿಜಯವಿಟ್ಠಲನ್ನ ದಯದಿಂದ ಆ -

ಪನ್ನನಿವನೆಂದು ಚನ್ನಾಗಿ ಒಲಿದೂ ॥ 6 ॥ 


 ಆದಿತಾಳ 


ಆಗಮ ಸಂಚಿತ ಹರಿಸಿ ಆಗುವ ಪ್ರಾರಬ್ಧಗಳ

ವೇಗಾನುಸಾರ ತೀರಿಸಿ ತಾಗಿದ ದುಃಖ ಸ್ಪರುಶ

ಪೋಗಲಾಡಿಸಿ ಅವರವರ ಯೋಗ್ಯತಾವರಿತು ಸುಖವ ಪಾಲಿಸಿ

ಭಾಗವತರನ ಮಾಡಿ

ಶ್ರೀಗುರು ವಿಜಯವಿಟ್ಠಲ ಮುಕುತಿಯನೀವ ॥ 7 ॥ 


 ಜತೆ 


ಧ್ಯಾನದಿಂದಲಿ ಮನಸು ನಿಲ್ಲಿಸಿ ಜ್ಞಾನವ ಪಡೆದು

ಅನಂತ ವಿಜಯವಿಟ್ಠಲನ ಲೋಕವ ಸೇರೋ ॥

********