Showing posts with label ತ್ರಿಭುವನದೊಳಗೆ ನಿನ್ನ vijaya vittala ankita suladi ತಾಮ್ರಪರ್ಣಿ ಸುಳಾದಿ TRIBHUVANADOLAGE NINNA TAMRAPARNI SULADI. Show all posts
Showing posts with label ತ್ರಿಭುವನದೊಳಗೆ ನಿನ್ನ vijaya vittala ankita suladi ತಾಮ್ರಪರ್ಣಿ ಸುಳಾದಿ TRIBHUVANADOLAGE NINNA TAMRAPARNI SULADI. Show all posts

Saturday 1 May 2021

ತ್ರಿಭುವನದೊಳಗೆ ನಿನ್ನ vijaya vittala ankita suladi ತಾಮ್ರಪರ್ಣಿ ಸುಳಾದಿ TRIBHUVANADOLAGE NINNA TAMRAPARNI SULADI


  Audio by Vidwan Sumukh Moudgalya


ಶ್ರೀ ವಿಜಯದಾಸಾರ್ಯ ವಿರಚಿತ  ತಾಮ್ರಪರ್ಣಿ ಸುಳಾದಿ 


 ರಾಗ : ಬೃಂದಾವನಸಾರಂಗ 


 ಧ್ರುವತಾಳ 


ತ್ರಿಭುವನದೊಳಗೆ ನಿನ್ನ ವೈಭವಕ್ಕಿದಿರಾರು 

ನಾಭಿಯಲಿ ಮಗನ ಪೆತ್ತ ಶೋಭನ ದೇವ 

ಶ್ರೀ ಭೂದುರ್ಗೇರ ಕೂಡ ವೈಭೋಗದಿಂದ ಮೆರೆದ 

ವಿಭುವೆ ವಿಶ್ವ ಮಹಿಮಾ ವಿಭವ ವರದ 

ವಿಬುಧರ ಕೈಯಾ ಶುಲಭಾವಾದರಗೆಳಿಯಾ 

ಅಭಿಮುಖದವರಿಗೆ ಅಭಯ ಪರಿಪಾಲಿಪನೆ 

ಲೋಭಿಗಳರಸೆ ವಿಜಯವಿಠಲರೇಯಾ 

ದ್ವಿಭುಜನಾಗಿ ಹೃದಯಾಂಬುಜದ ನಿಲಯಾ ॥೧॥


 ಮಟ್ಟತಾಳ 


ವೈಕುಂಠನಾಥ ವಿಜಯಾಸನ ದೇವ 

ಲೋಕಪರಿಪಾಲಾ ದೇವದೇವೇಶ 

ಆ ಕಂಜದಳ ನಯನಾ ಶ್ರೀ ಚೋರನಾಟ್ಯ 

ಶ್ರೀ ಕರನಿಕ್ಷೇಪ ಮಕರಾಯತ 

ಲಕ್ಷ್ಮೀಕಾಂತ ಶ್ರೀ ಆದಿನಾಥಸ್ವಾಮಿ 

ನೀ ಕರುಣದಿಂದ ಕಾಪಾಡುವುದು 

ಲೋಕರಕ್ಷಾಮಣಿ ವಿಜಯವಿಠಲರೇಯಾ 

ನೇಕ ಮಹಿಮನೆಂದು ವಾಕುಮಾಣದೆ ಪೇಳಿ ॥೨॥


 ತ್ರಿವಿಡಿತಾಳ 


ಈ ತಾಮ್ರಪರನಿಯಾ ಸ್ನಾನಮಾಡಿದ ನರನ 

ಪಾತಕಾ ಓಡಿ ಘೋಳಿಡುತ ಪೋಗುವದು 

ಭೂತಳದೊಳಗಿದರ ಸರಿಸಮಾನವಿಲ್ಲ 

ಯಾತಕ್ಕೆ ಸಂಶಯಮಾಡಸಲ್ಲ

ಪ್ರೇವಿತ ಸಂಸ್ಕಾರವಿಲ್ಲದವರ ವಂಶಜಾ 

ಪ್ರೀತಿಯಲಿ ಸ್ನಾನವ ಮಾಡಲವರೂ 

ಪೀತಾಂಬರದುಡಿಗೆ ಶಂಖಚಕ್ರವ ಧರಿಸಿ 

ನೀತಿ ಪದವಿಯಲ್ಲಿ ಸುಖಬಡುವರು 

ದಾತಾ ವಿಜಯವಿಠಲ ನವತಿರುಪತಿವಾಸಾ 

ಮಾತಿಗೆ ಮನಸೋತು ಮಹಪುಣ್ಯನೀವನು ॥೩॥


 ಅಟ್ಟತಾಳ 


ಅನಂತಜನುಮದ ಪುಣ್ಯಫಲಿಸಿದರೆ 

ಈ ನದಿಯಲ್ಲಿ ಒಂದು ಸ್ನಾನ ದೊರಕುವದು 

ಈ ನಿಧಿಗಳಾದ ನವತಿರುಪತಿ ದರು 

ಶನವಾಗುವದು ಒಂದೆ ವಾಸರದಲ್ಲಿ 

ಮಾನಷೋತ್ತು ಮರಿಗಲ್ಲಾದಲೆ ಮೊದಲಾದಾ 

ಹೀನಜನರಿಗೆ ಸಾಧ್ಯವಾಗದೆನ್ನಿ 

ಈ ನುಡಿ ಸತ್ಯವು ವಿಜಯವಿಠಲ ಬಲ್ಲಾ

ಜ್ಞಾನದಿಂದಲಿ ಸರ್ವರಿಗೆ ಸಾಕಲ್ಯಾ ॥೪॥


 ಆದಿತಾಳ 


ಹರಿ ಸಿರಿ ವಿರಿಂಚಿ ಮರುತಗರುಡಶೇಷಾ 

ಹರ ಇಂದ್ರ ಸ್ಮರಾದ್ಯರ ತರುವಾಯ ತಿಳಿದು 

ತರತಮ್ಯ ಮನದಿಂದ ಚರಿಸಿ ಯಾತ್ರೆಗೈಯಾಲು 

ಮರಳೆಬಾರನು ಇಹಕ್ಕೆ ವರವೇದ ಸಿದ್ಧಾವೆನ್ನಿ 

ಪರತತ್ವನಾದ ನಮ್ಮ ವಿಜಯವಿಠಲ ನವ -

ತಿರುಪತಿಯಲ್ಲಿ ಇದ್ದು ಪೊರೆವ ನಂಬಿದವರ ॥೫॥


 ಜತೆ 


ವೈಕುಂಠಾದಿ ಧ್ಯಾನಾ ತಾಮ್ರಪರ್ಣಿಯ ಸ್ನಾನಾ 

ಏಕ ಚಿತ್ತದಿ ಮಾಡಲು ಒಲಿವ ವಿಜಯವಿಠಲ ॥೬॥

*******


ತಾಮ್ರಪರ್ಣಿ ನದಿಯ ವಿಚಾರ : 

(ಸಂಗ್ರಹ)


 ತಾಮ್ರಪರ್ಣೀಸರಿತ್ತೋಯಂ ಸೇವನೀಯಂ ಮುಮುಕ್ಷುಭಿಃ ।

 ಮುಕ್ತೀಕರೋತಿ ಯತ್ರತ್ಯಾ ಶುಕ್ತಿಶ್ಚ ಪತಿತಂ ಜಲಮ್ ॥


 ವಿವರಣೆ : ತಾಮ್ರಪರ್ಣೀ ನದಿಯ ಜಲದಲ್ಲಿರುವ ಮುತ್ತಿನಚಿಪ್ಪು ಸಹ ತನ್ನಲ್ಲಿ ಬಿದ್ದ (ಮಳೆ) ನೀರನ್ನು ಮುತ್ತನ್ನಾಗಿ ಮಾಡುತ್ತದೆ ; ಹೀಗೆ ಜಲವನ್ನೂ ಮುತ್ತನ್ನಾಗಿಸುವ ತಾಪ್ರಪರ್ಣೀ ನದಿಯ ಜಲವು ಮುಕ್ತಿಯನ್ನು ಬಯಸುವ ಜನರಿಂದ ಅವಶ್ಯ ಸೇವಿಸಲ್ಪಡಬೇಕು.


'ತಿರುನಲ್ವೇಲಿ' ಎಂಬ ತಮಿಳುನಾಡಿನ ಪಟ್ಟಣದ ಬಳಿ "ತಾಮ್ರಪರ್ಣೀ" ನದಿಯು ಹರಿಯುತ್ತದೆ. ಅಲ್ಲಿಂದ ಸಾರು 37 ಕಿ.ಮೀ ದೂರದಲ್ಲಿ ಅಂಬಾ ಸಮುದ್ರ ಎಂಬ ಸ್ಥಳದಿಂದ 9 ಕಿ.ಮೀ ದೂರದಲ್ಲಿ ಸುಮಾರು 80 ಅಡಿ ಆಳಕ್ಕೆ ತಾಮ್ರಪರ್ಣೀ ನದಿಯು ಧುಮುಕುತ್ತದೆ. ಅದಕ್ಕೆ ಪಾಪನಾಶನ ತೀರ್ಥ ಎಂದು ಹೆಸರು.  ಭಾಗವತ , ಕೂರ್ಮ ಮೊದಲಾದ ಪುರಾಣಗಳಲ್ಲಿ ವರ್ಣಿತವಾಗಿರುವ ಈ ನದಿಯು ತನ್ನ ಜಲಪಾನದಿಂದ ಹರಿಭಕ್ತಿಯನ್ನು ಹುಟ್ಟಿಸುವ ಅಪೂರ್ವ ನದಿಗಳಲ್ಲಿ 

ಒಂದು ಎಂಬ ಮಾತು ಭಾಗವತ ಪುರಾಣದಲ್ಲಿದೆ.

👇👇👇

 ತಾಮ್ರಪರ್ಣೀ ನದೀ ಯತ್ರ ಕೃತಮಾಲಾ ಪಯಸ್ವಿನೀ ।

 ಪ್ರಾಯೋ ಭಕ್ತಾ ಭಗವತಿ ವಾಸುದೇವೇsಮಲಾಶಯಾಃ॥


ಜಲವನ್ನು ಮುತ್ತನ್ನಾಗಿಸುವ ಈ ನದಿಯ ನೀರು ಜಡವನ್ನು ಸಹ ಮುಕ್ತನನ್ನಾಗಿಸುತ್ತದೆ ಎಂದ ಮೇಲೆ ಚೇತನರನ್ನು ಮುಕ್ಕರನ್ನಾಗಿಸುತ್ತದೆ ಎಂಬುದು ಕೈಮುತ್ಯಸಿದ್ಧ ಎಂಬಲ್ಲಿನ ಕಾವ್ಯಧ್ವನಿಯು ಅಪೂರ್ವವಾದುದು.


ಮೊದಲ ಶ್ಲೋಕದಲ್ಲಿ " ಪತಿತಂ " ಎಂಬುದಕ್ಕೆ ' ಸದಾಚಾರಭ್ರಷ್ಟ' ಎಂದೂ,

" ಜಲಂ "  ಎಂಬುದಕ್ಕೆ ' ಜಡಂ' ಎಂದೂ , 

" ಮುಕ್ತೀಕರೋತಿ "  ಎಂಬುದಕ್ಕೆ ' ಸಂಸಾರಾನ್ಮುಕ್ತಿಕರೋತಿ' ಎಂದೂ 'ಧ್ವನಿ'.


ತಾಮ್ರಪರ್ಣಿಯು ಭೀಮರಥಿಗೆ ಸಮಾನ; ಇದರಲ್ಲಿ ಅನಂತನನ್ನು ಚಿಂತಿಸಬೇಕು.

ತಿರುನಲ್ವೇಲಿಯಲ್ಲಿ ಶ್ರೀ ಶ್ರೀಪಾದರಾಜರ ವಿದ್ಯಾಗುರುಗಳಾದ ಶ್ರೀ ವಿಭುದೇಂದ್ರತೀರ್ಥರ ಮೂಲಬೃಂದಾವನವನ್ನೂ ನಾವು ನೋಡಬಹುದು.


🙏 ಶ್ರೀಕೃಷ್ಣಾರ್ಪಣಮಸ್ತು 🙏

***