ಕಾಖಂಡಕಿ ಶ್ರೀ ಮಹಿಪತಿರಾಯರು
ಇಲ್ಲೆ ಉಂಟು ಮುಕುತಿ ನೋಡಿ ನೋಡಿ ಒಂದೆ ಮನದಲಿ ಸುಲಭವಾಗಿ ದೋರುತಿಹ್ಯದು ಗುರುಕರುಣದಲಿ ಧ್ರುವ
ಏನುಹೇಳಲಿ ಸ್ವಾನುಭವ ಸುಖದ ಸಿದ್ಧಿಯ ಜ್ಞಾನಿಬಲ್ಲ ಭಾಸುತಿಹ್ಯ ಸ್ವಕೀಲ ಸಿದ್ಧಿಯ ಮನವ ಬಲಿದು ಮಾಡಿಕೊಳ್ಳಿ ಜ್ಞಾನಸಿದ್ಧಿಯ ತನುವಿನೊಳು ದೋರುತೀಹ್ಯ ಶ್ರೀಗುರು ಸುಧೆಯ 1
ನಿಟಿಲ ಭ್ರೂಮಧ್ಯ ದಾಟಿನೋಡಿ ಮುಕ್ತಿಯ ದಿಟವಾಗಿ ಕೂಡಿ ಪ್ರಭಯ ಜ್ಞಾನ ಶಕ್ತಿಯ ಕುಟಿಲವಲ್ಲ ಕೇಳಿ ಮಾತು ನಿಜಯುಕ್ತಿಯ ನಟನೆ ತನ್ನೊಳು ದೋರುವ ಗುರುಭಕ್ತಿಯ 2
ಲೇಸು ಲೇಸಾಯಿತು ಎನಗೆ ಭಾಸ್ಕರ ಕರುಣವು ಭಾಸುತಿಹ್ಯದು ವಾಸುದೇವನ ಪುಣ್ಯಚರಣವು ಮೋಸವಿಲ್ಲದೆ ನೀಗಿತು ಜೀವನ ಜನ್ಮಮರಣವುದಾಸ ಮಹಿಪತಿಗಾಯಿತು ಘನಸ್ಫುರಣವು 3
***