..
kruti by ವಿದ್ಯಾರತ್ನಾಕರತೀರ್ಥರು vidyaratnakara teertharu
ಇಂದಿರಾರಮಣ ಆನಂದಮೂರುತಿ ನಿನ್ನ
ವಂದಿಸಿ ಕರಗಳ ಬಂಧಿಸಿ ಬೇಡುವೆ ಪ
ಎಂದಿಗೂ ಎನ್ನ ಹೃದಯಮಂದಿರ ಬಿಡದಿರೊ
ನಂದಮುನ್ನೀಶ್ವರ ವಂದಿತ ಚರಣನೆ ಅ.ಪ
ಕೃತಿರಮಣನೇ ಮುನಿಸತಿಯು ಶಾಪದಿ ಶಿಲಾ
ಕೃತಿಯಾಗಿರಲು ಶ್ರೀಪತಿಯೇ ನೀ ಬಂದು
ರತಿಪತಿಪಿತನೆ ಯುವತಿಯನ್ನೆ ಮಾಡಿದ
ಪತಿತಪಾವನ ನೀನಲ್ಲವೇನೊ ಹರಿಯೆ 1
ನಾಕರಾಜನ ಸುತನು ಕಾಕರೂಪದಿ ಬಂದು
ಏಕಾಂತದೊಳು ಅವಿವೇಕವ ಮಾಡಲು
ಶ್ರೀಕಾಂತ ತೃಣದಿಂದ ಭೀಕರಿಸಿ ಮೂರು
ಲೋಕ ಸುತ್ತಿಸಿ ಅವನ ನೀ ಕಾಡಿದೆ ಹರಿಯೆ 2
ಮತ್ತು ಗಜೇಂದ್ರನಾಪತ್ತು ಪರಿಹರಿಸಿ
ಉತ್ತಮ ಪದವವಗಿತ್ತು ರಕ್ಷಿಸಿದೆ
ಭಕ್ತವತ್ಸಲ ಎನ್ನ ಕುತ್ತುಗಳನು ನೀ
ಚಿತ್ತಕೆ ತರದೇ ಸದ್ವøತ್ತನೆಂದೆನಿಸೈ 3
ನೇತ್ರವೆಂಬುದು ನಾರಿಗಾತ್ರದೊಳಿರುವುದು
ಶ್ರೋತ್ರವು ಗೀತವ್ರಾತದೊಳಿಹುದು
ಚಿತ್ತ ವಿಷಯ ಭೋಗಾಸಕ್ತವು ಗೋಪಿಕಾ
ಮಿತ್ರನೇ ಅಂಜಲಿಮಾತ್ರ ನೀನೊಪ್ಪಿಕೋ 4
ವರನಾಮಗಿರಿಲಕ್ಷ್ಮೀನರಸಿಂಹ ಮೂರುತೆ
ಚರಣಕಮಲಯುಗ ಸ್ಮರಣೆಯ ಎನಗೆ
ಸ್ಥಿರವಾಗಿರುವಂತೆ ವರವಿತ್ತು ಸಲಹೆಲೊ
ಪರಮಪುರುಷ ದಿನಕರಕುಲತಿಲಕನೆ 5
***