ankita ಶ್ರೀಕರವಿಠಲ
ರಾಗ: ಮಿಶ್ರ ನಾಟ ತಾಳ: ಆದಿ
ಕರುಣಿಸಿ ಪಿಡಿಯೋ ಕೈಯ್ಯಾ ಗುರು ರಾಘವೇಂದ್ರರಾಯಾ ಪ
ನರಸಿಂಧೂರಾರಿ ದಯದಿ ವರ ಪಡೆದು ಕ್ಷೋಣಿತಳದಿ
ಪೊರೆಯುವ ಕರುಣಿ ಎಂದು ಮೊರೆಹೊಕ್ಕೆ ದೀನಬಂಧೂ 1
ಕೋರಿದರಭೀಷ್ಟವಗರೆದು ಆರೊಂದುನೂರುವರುಷ
ಸಾರಿದಾ ಜನರಾ ಪೊರೆವ ಸೂರಿಸುಧೀಂದ್ರತನಯಾ 2
ನೀನೊಲಿದಮಾತ್ರ ಮನದಿ ಮಾವಾರಿ ಪೊರೆವ ದಯದಿ
ದೇವಸ್ವಭಾವ ಜನದೀ ನೋವಾಗಗೊಡದೆ ಭವದೀ 3
ನಾ ಮಾಡಿದಪರಾಧ ನೀ ಮಾತ್ರ ಕ್ಷಮಿಸು ಬಿಡದೆ
ನಾ ಮನದಿ ಬೇಡಿಕೊಂಬೆ ಹೇ ಮಂತ್ರಮುನಿಯೆ ಧೊರೆಯೇ 4
ಜಪತಪವ ಮಾಡಲರಿಯೆ ಕುಪಥಾದೊಳಿರುವ ಎನ್ನ
ಸುಪಥವ ತೋರಿ ಸಲಹೋ ಅಪ್ಪಣಾರ್ಯಗೊಲಿದ ಪ್ರಭುವೇ 5
ನಿನ್ಹೊರತು ಪೊರೆವರನ್ನು ಇನ್ನಾರ ಕಾಣೆ ಜಗದಿ
ಮನ್ನಿಸಿ ಪೊರೆವ ದಾತ ಎನ್ನಾಣೆ ಮುನಿವರ್ಯ 6
ಸಾಗಿ ನೀ ಬಾರೊ ಎಂದು ಕೂಗುತ ಕರೆಯಕೇಳಿ
ಬೇಗಾನೆಬಂದು ಪೊರೆವೆ ಬಾಗುವೆ ನಿನ್ನ ಪದಕೆ 7
ಜನನಿಯು ತನಯನನ್ನು ಅನುನಯದಿ ಪೊರೆಯುವಂತೆ
ಮುನಿವರ್ಯ ಪ್ರಾರ್ಥಿಸುವೆ ಕ್ಷಣಬಿಡದೆ ಸಲಹೂ ತಂದೆ 8
ವಟುವೇಷಧಾರಿ ಶ್ರೀಕರವಿಠಲಾನೆ ಪರನು ಜಗದಿ
ಧಿಟನೆಂದು ಸಾರಿದಂಥಾ ವಿಠಲಾರ್ಯಗೊಲಿದಮೌನಿ 9
***