ರಾಗ -: ತಾಳ -
ಕಂಡೆ ನಾನು ಮಂಡಲದೊಳು ಕಂಡೆ ನಾನು l
ಕಂಡೆ ನಾನು ಪುರಂದರದಾಸರ l
ತೊಂಡರ ಪಾದಕ್ಕೆ ತೊಂಡನೆನಿಪ ll ಪ ll
ಪಾಕಶಾಸನಾದಿನೇಕ ದೇವರುಗಳ l
ಆ ಕ್ರಮ ತಿಳಿದಂಥ ಲೋಕೇಶನವರ ll ೧ ll
ಪಂಚಭೇದಾರ್ಥವ ಹಂಚಿಕೆ ಬಲ್ಲಂಥ
ಪಂಚಬಾಣನೈಯ್ಯನಂಚು ಸೇರಿದರ ll ೨ ll
ವಿಶ್ವ ತೈಜಸ ಪ್ರಾಜ್ಞ ಮೂರು ರೂಪಂಗಳು
ನಿಶ್ಚಲದಲಿ ಹೃದಯ ನಿಮ್ನದಲಿನೋಳ್ಪರ ll ೩ ll
ಭಕ್ತರ ಉಕ್ತಿಗಾಸಕ್ತರಾಗಿ ಇನ್ನು
ಮುಕ್ತಿಯು ಕೊಡುವ ಮುಕುಂದನ್ನ ಹೊಂದಿದರ ll ೪ ll
ದಾಸ ವಿಜಯರನು ಲೇಸಾಗಿ ಭಜಿಸೆಂದ
ಭಾಸುರ ವೇಣು ಶ್ರೀದಾಸರಂಘ್ರಿಯನು ll ೫ ll
ಹಿಂದಿನ ಪಾಪದದಂದುಗ ಪರಿಸೆನ್ನ l
ಮುಂದ ಮುಕ್ತಿಯ ತಂದು ಕೊಡುವರ ll ೬ ll
ಪರಮ ಕರುಣಿ ಜನಾರ್ದನವಿಟ್ಠಲನ್ನ
ಕುರುಹ ತೋರಿ ಹರಿಪುರದೊಳಿರುವರ ll ೭ ll
***