kruti by Nidaguruki Jeevubai
ನೀರಿನಿಂದಲೆ ಸರ್ವಫಲ ಬಾಹೋದು
ನೀರಜಾಕ್ಷನ ಸೇವೆ ಮಾಳ್ಪ ಸುಜನರಿಗೆ ಪ
ನೀರಿಲ್ಲದಲೆ ಯಾವ ಸಾಧನವು ನಡೆಯದು
ನೀರಿಲ್ಲದಲÉ ಯಾಗ ತಪಸ್ಸು ನಿಲ್ಲುವದು
ನೀರಿಲ್ಲದಲೆ ಸ್ನಾನ ಆಚಾರಹೀನವು
ನೀರಿಲ್ಲದಲೆ ದೇವತಾರ್ಚನೆಯು ಇಲ್ಲವು 1
ನೀರೆಂದರೆ ಬರಿಯ ಜಡವಾದ ನೀರಲ್ಲ
ನೀರಜಾಕ್ಷನು ಜಲದಿ ವಾಸವಾಗಿಹನು
ವಾರಿಜಾಸನ ಮುಖ್ಯ ಸುರರೆಲ್ಲ ಹರುಷದಲಿ
ನೀರಮಧ್ಯದೊಳಿರುವ ಹರಿಯಧ್ಯಾನಿಪರೆಲ್ಲ2
ಉದಯಕಾಲದಿ ಮುಖವ ತೊಳೆಯೆ ಜಲವಿರಬೇಕು
ಮಧುಸೂದನನ ಮನೆಯ ಸಾರಿಸಲು ಜಲಬೇಕು
ಹೃದಯ ಶುದ್ಧದಿ ಸ್ನಾನ ಮಾಡೆ ಜಲವಿರಬೇಕು
ಮುದದಿ ಮಡಿಯುಡುವುದಕೆ ಉದಕವಿರಬೇಕು3
ಮೃತ್ತಿಕಾಶೌಚಕ್ಕೆ ಅಗತ್ಯಜಲವಿರಬೇಕು
ನಿತ್ಯ ಗೋಸೇವೆಗೆ ಉದಕಬೇಕು
ಮತ್ತೆ ಶ್ರೀ ತುಳಸಿಗೆರೆಯಲು ಉದಕವಿರಬೇಕು
ಮತ್ತೆ ಹರಿಪೂಜೆಗಗ್ರೋದಕವು ಬೇಕು4
ಸಚ್ಚಿದಾನಂದನ ಅಭಿಷೇಕಕ್ಕೆ ಜಲಬೇಕು
ಮತ್ತೆ ಪಾಕವು ಮಾಡೆ ಜಲವುಬೇಕು
ನಿತ್ಯ ತೃಪ್ತನ ನೈವೇದ್ಯಕ್ಕೆ ಜಲವು ಬೇಕು
ಅರ್ತಿಯಿಂದ ಅತಿಥಿ ಪೂಜೆಗೆ ಉದಕಬೇಕು 5
ಉತ್ತಮರು ಮನೆಗೆ ಬಂದರೆ ಪಾದ ತೊಳಿಬೇಕು
ಮತ್ತೆ ಅವರಿಗೆ ಸ್ನಾನಕಣಿ ಮಾಡಬೇಕು
ಸುತ್ತ ಬೆಳೆÀಗಳಿಗೆಲ್ಲ ಮತ್ತೆ ನೀರಿರಬೇಕು
ಸತ್ಯ ಮೂರುತಿ ಪಾದದಂಗುಷ್ಟದಲಿ ಜನಿಸಿದ6
ಹಸುಮಕ್ಕಳಿಗೆ ನಿತ್ಯ ಎರೆಯೆ ನೀರಿರಬೇಕು
ಕುಸುಮ ಪುಷ್ಪದ ಗಿಡಕೆ ನೀರುಬೇಕು
ವಸುದೇವಸುತನ ತೆಪ್ಪೋತ್ಸವಕೆ ಜಲಬೇಕು
ಎಸೆವ ಕದಲಾರತಿಗೆ ಉದಕಬೇಕು 7
ನೀರಿನೊಳು ಹಾವಿನ ಮೇಲೆ ಮಲಗಿದ ಹರಿಯ
ನಾಭಿನಾಳದ ತುದಿಯಲಿರುವ ಕಮಲದಲಿ
ನೀರಜಾಸನನ ಪಡೆದಿರುವ ಮಹಿಮೆಯ ಕೇಳಿ
ನೀರಿನಲಿ ಹರಿಯ ಅವತಾರ ರೂಪಗಳುಂಟು8
ನೀರಿನೊಳು ವಾರುಣಿಯಪತಿಯ ಶಯ್ಯದೊಳಿಹನು
ನೀರಿನೊಳು ಮುಳುಗಿ ವೇದವ ತಂದನು
ನೀರಿನೊಳು ಮುಳುಗಿ ಭಾರವ ಪೊತ್ತು ನಿಂತನು
ನೀರಜಾಕ್ಷನು ನಾರಬೇರ ಮೆದ್ದಿಹನು 9
ನೀರಜೋದ್ಭವಪಿತನು ಕ್ರೂರರೂಪವ ತಾಳ್ದ
ನೀರೆ ಅದಿತಿಯ ಪುತ್ರನಾಗಿ ನಿಂತ
ನೀರಜಾಕ್ಷನು ಪರಶುವಿಡಿದು ಸಂಚರಿಸಿದನು
ನೀರೆಗೋಸುಗ ಸಾಗರಕÉ ಸೇತುವೆಯ ಕಟ್ಟಿದನು10
ನೀರಿನೊಳು ಗಜದ ಶಾಪವ ಕಳೆದು ಪೊರೆದನು
ನೀರೆ ದ್ರೌಪದಿಯ ಅಭಿಮಾನವನು ಕಾಯ್ದ
ನೀರ ಮಧ್ಯದಿ ದ್ವಾರಕಾಪುರವ ರಚಿಸಿದನು
ನೀರಜಾಕ್ಷಿಯರ ಕೂಡಿ ನೀರೊಳಗೆ ಆಡಿದನು 11
ಕಮಲಾಕ್ಷಿ ಪುಟ್ಟಿರುವ ಕಮಲ ಜಲದಲ್ಲಿಹುದು
ಕಮಲನಾಭ ವಿಠ್ಠಲ ಜಲದೊಳೋಲ್ಯಾಡುವ
ಶ್ರಮವ ಪರಿಹರಿಪ ಚಂದ್ರನು ಜಲದಿ ಪುಟ್ಟಿಹನು
ಕಾಮಧೇನು ಐರಾವತವು ಪುಟ್ಟಿದ ಜಲವಯ್ಯ 12
***