Showing posts with label ನೀನು ಪುಟ್ಟಿಸಲು gopala vittala ankita suladi ಹರಿಸ್ವತಂತ್ರ ಸುಳಾದಿ NEENU PUTTISALU HARI SWATANTRA SULADI. Show all posts
Showing posts with label ನೀನು ಪುಟ್ಟಿಸಲು gopala vittala ankita suladi ಹರಿಸ್ವತಂತ್ರ ಸುಳಾದಿ NEENU PUTTISALU HARI SWATANTRA SULADI. Show all posts

Friday, 5 February 2021

ನೀನು ಪುಟ್ಟಿಸಲು gopala vittala ankita suladi ಹರಿಸ್ವತಂತ್ರ ಸುಳಾದಿ NEENU PUTTISALU HARI SWATANTRA SULADI

 

Audio by Mrs. Nandini Sripad


ಶ್ರೀ ಗೋಪಾಲದಾಸಾರ್ಯ ವಿರಚಿತ  ಹರಿಸ್ವತಂತ್ರ ಸುಳಾದಿ 


( ಹರಿ ಸಕಲ ಕರ್ತನೆಂಬ ಮಹಾಮಹಿಮೆಯನ್ನು ಅನೇಕ ಉಪಮೆಗಳೊಂದಿಗೆ ಶ್ರೀಹರಿಯ ಸ್ವಾತಂತ್ರ್ಯ ವರ್ಣನೆ. ) 


 ರಾಗ ಭೈರವಿ 


 ಧ್ರುವತಾಳ 


ನೀನು ಪುಟ್ಟಿಸಲು ಪುಟ್ಟುವ ಜೀವ ನಾನೈಯ್ಯಾ

ನೀನು ಪೋಷಿಸಲು ಪೋಷಿಸಿಕೊಂಬ ನಾನಯ್ಯ

ನೀನು ಚಲಿಸಲು ಚಲಿಸುವೆನಯ್ಯಾ ನಾನು

ನೀನು ತಡಹಲು ತಡಹುವೆನಯ್ಯಾ ನಾನು

ನೀನು ನುಡಿಸಲು ನುಡಿವದು ನಾಲಿಗಿ

ನೀನೆ ವ್ಯಾಪ್ತನು ಸ್ಥೂಲ ಸೂಕ್ಷ್ಮ ದೇಹಗಳಲ್ಲಿ

ನೀನೆ ಕರ್ತಾ ಭೋಕ್ತಾ ನೀನೆ ಆಧಾರನು

ನೀನೆ ನೇಮಿಸಿದಂತೆ ಲಾಭ ನಷ್ಟಂಗಳು

ನೀನೆ ಸರ್ವ ಚರಾಚರ ಪ್ರೇರಕ ನೀನೆ

ನೀನೆ ಸ್ವಾತಂತ್ರ ಸ್ವಾತಂತ್ರ ಸ್ವಪ್ರಕಾಶ

ನೀನೆ ವ್ಯಾಪಕ ಸರ್ವ ಜೀವ ಜಗತ್ತಿನಲ್ಲಿ

ನೀನೆ ನೀನೆ ನೀನೆ ಗೋಪಾಲವಿಟ್ಠಲ ॥ 1 ॥ 


 ಮಟ್ಟತಾಳ 


ನಾನಾ ಯೋನಿಗಳಲ್ಲಿ ಜನಿಸಿ ಬರಲಿಕ್ಕೆ

ನಾನು ಸ್ವಾತಂತ್ರನೇನೊ ಪೇಳೆಲೊ ಹರಿಯೆ

ನೀನೆ ಸೃಷ್ಟಿಸುವೆ ಕರ್ಮ ನೆವನ ಮಾಡಿ

ಏನೋ ಕರ್ಮಕೆ ಸ್ವಾತಂತ್ರ ನಿನ್ನ ವಿನಹ ಉಂಟೆ

ನೀನೆ ಕಾರಣ ಯೋಗ್ಯತ ನಿನ್ನಾಧೀನ

ಏನಾದ ಕರ್ಮದ್ವಯ ನೀನೆ ಮಾಡಿಪುವಿ

ನೀನೆ ಮಾಡಿದೆಂದು ನಿನಗೆ ಸಮರ್ಪಿತವು

ನಾನು ನಿನ್ನಾಧೀನ ಗೋಪಾಲವಿಟ್ಠಲ ॥ 2 ॥ 


 ರೂಪಕತಾಳ 


ಪೃಥಿವಿಪತಿ ಒಂದು ರಥವ ನಿರ್ಮಾಣವು ಮಾಡಿ

ಅತಿ ಉತ್ತಮವಾದ ವಾಜಿಗಳನ್ನು ಕಟ್ಟಿ

ಮಥನಿಸಿ ಸೂತನೊಬ್ಬನ ಮಾಡಿ ಆ ಕ್ಷಣ

ರಥದ ಮಧ್ಯದಲ್ಲಿ ತಾ ಕುಳಿತು ಕಂದನ ಸಹ

ಪಥವನರಿತು ನಡಿಸೆಂದು ಸೂತಗೆ ಪೇಳೆ

ಯಥಾ ಯಥಾ ಮನದಿಚ್ಛೆ ಬಂದಂತೆ ನಡಿಸೋರು

ರಥಕೆ ಸ್ವಾತಂತ್ರ ಆವದು ಪೇಳೊ ಹರಿಯೆ

ರಥ ಎನ್ನ ದೇಹವು ಪೃಥಿವಿಪತಿ ನೀನು

ರಥಿಕರೆ ತಾತ್ವಿಕರು ಕಂದನಂದದಿ ನಾನು

ಅತಿ ಉತ್ತಮ ವಾಜಿಗಳೆ ಇಂದ್ರಿಯಗಳು

ಜತನಾಗಿ ಪಿಡಿದ ಹಗ್ಗವೆ ಎನ್ನ ಮನಸು

ಖತಿಯಿಂದ ಪಿಡಿದಟ್ಟುವ ಮಣಿಯೆ ಕರ್ಮಂಗಳು ಆ -

ರಥಕೆ ಈ ರಥಕೇನು ಭೇದ ಉಂಟೆ

ಹಿತದಿಂದ ಪೇಳೆಲೊ ರಥಾಂಗ ಪಾಣಿಯೇ ಪಾ -

ರಥನ ಪಾಲಕನೆ ಗೋಪಾಲವಿಟ್ಠಲ ಕೇಳೊ

ಸತತ ನೀ ಪ್ರೇರಕ ಸಥೆ ನಿನ್ನದೊ ॥ 3 ॥ 


 ಝಂಪೆತಾಳ 


ಪತಿಯು ತಾನಾಗಿ ತನ್ನ ಸತಿಗೆ ಪಾಪ ಪುಣ್ಯದ

ವ್ರತವ ಮಾಡೆಂದು ನಿರೂಪ ಕೊಡಲು ಇದೇ

ಶ್ರುತಿ ಸ್ಮೃತಿ ನಿರ್ನಯಗಳು ಪೇಳುತಲಿವೆ

ಪತಿ ನೀನು ಎನಗೆ ಸತಿಯು ನಿನಗೆ ನಾನು

ಪತಿತ ಪಾವನ ಪಾಪ ನಿರ್ಲೇಪನಹುದು ಜಗ -

ತ್ಪತಿ ಎಂದೆನಿಸಿಕೊಂಬ ಅತಿಶಯವು ನಿನಗಯ್ಯಾ

ಹಿತದಿಂದ ಕೇಳೊಂದು ದೃಷ್ಟಾಂತರವು ಎನ್ನ

ಮತಿ ನೀ ಪ್ರೇರಿಸಿದಂತೆ ಪೇಳುವೆನೊ ಹರಿಯೆ

ಅತಿ ಸೀತ ಬಾಧಿಸೆ ವನ್ಹಿ ಆಶ್ರೈಸುವರೊ

ಜಿತವಾಗಿ ಸೀತ ವನ್ಹಿಗೆ ಲೇಪಿಸುವದೇ

ಪತಿತ ಪಾವನ ಪಾಪನಿರ್ಲೇಪ ನೀ ಸತ್ಯ

ದಿತಿಜಮರ್ದನನೆ ಗೋಪಾಲವಿಟ್ಠಲ ನಿನ್ನ

ಕೃತಿ ಅತಿ ಆಶ್ಚರ್ಯವು ಹಿತವೊ ಭಕ್ತರಿಗೆ ॥ 4 ॥ 


 ತ್ರಿವಿಡಿತಾಳ 


ತರಣಿ ಉದಿತನಾಗೆ ತಮವು ನಿಲ್ಲುವದೆ

ಗರುಡನೆದುರಿಗೆ ಉರಗ ಸರಸನಾಡುವದೆ

ಹರಿಯ ಕೂಡ ಕರಿ ತಿರುಗಿ ಕಾದುವದೆ

ಹರಿ ನಿನ್ನ ಕರುಣವಾಗಲು ದುರಿತದ ಭಯವೆ

ಸುರಪತಿ ವಜ್ರಕ್ಕೆ ಗಿರಿ ಪ್ರತಿನಿಧಿಯೆ

ಪರಮ ಬಲಾಢ್ಯನಿಗೆ ಹೇಡಿ ಅಂಜಿಕಿಯೆ

ಉರಿವ ಮಾರಿಗೆ ತೃಣವು ಅಣಕವಾಡುವದೆ

ಪರಮ ಪುರುಷ ನಿನ್ನ ಸ್ಮರಣಿ ಬಲವಿರಲಿಕ್ಕೆ

ದುರಿತಕಂಜೆನೊ ಜವನರ ದಂಡಕಂಜೆನೊ

ಪರಮದಯಾಳು ಗೋಪಾಲವಿಟ್ಠಲ ನಿನ್ನ

ಕರುಣ ಬಲಕಿನ್ನು ಮಿಗೆ ಬಲವಿಲ್ಲವೊ ॥ 5 ॥ 


 ಅಟ್ಟತಾಳ 


ನಿತ್ಯ ಪತ್ನಿ ಭಾವ ಲಕುಮಿಗಿತ್ತವ ನೀನು

ಸತ್ಯಲೋಕಾಧಿಪತ್ಯ ಬೊಮ್ಮಗಿತ್ತೆಲೊ ದೇವಾ

ಮೃತ್ಯುಂಜಯಗೆ ಕೈಲಾಸವಿತ್ತವ ನೀನು

ಭೃತ್ಯ ಇಂದ್ರಗೆ ತ್ರಿವಿಷ್ಟಪ ಕೊಟ್ಟೆಯ್ಯಾ ಈ

ಮರ್ತ್ಯುಲೋಕದ ಸಂಪದವಿಗಲ್ಲನೆ ಏಕ -

ಛತ್ರಾದಿಪತಿಗೆ ಒಂದು ಆಸ್ತಿ ನಾಸ್ತಿಗಳುಂಟೆ

ಅತ್ಯುನ್ನತ ನೀನು ಅಹಿರಾಜತಲ್ಪನೆ

ಮುತ್ತಿವೆ ರೋಮ ರೋಮಕೆ ಕೋಟಿ ಬ್ರಹ್ಮಾಂಡ

ನಿತ್ಯ ಖಗನು ವಾಹನನೇನೋ ನಿನ್ನ

ಕೃತ್ಯ ನೋಡಲು ಅತ್ಯಾಶ್ಚರ್ಯ ತೋರುತಲಿದೆ

ಸತ್ಯಸಂಕಲ್ಪನೆ ಗೋಪಾಲವಿಟ್ಠಲ 

ಉತ್ತಮರಿಗೆ ಸುಲಭ ಭೃತ್ಯಪಾಲಕನೆ ॥ 6 ॥ 


 ಆದಿತಾಳ 


ಜಲಧಿ ಪೊಕ್ಕರು ಬಿಡೆ ಜಲದಲಡಗೆ ಬಿಡೆ

ನೆಲದ ಮರಿಯಲಿ ಪೊಕ್ಕರೆ ನಿನ್ನ ಬಿಡೆನೊ

ಬಲು ಘೋರ ರೂಪತನದಲಂಜಿಸಲು ಬಿಡೆ

ಸುಲಭದಿ ಗತಿಯಿಲ್ಲ ಯಾಚಕ ನೆನೆ ಬಿಡೆ

ಬಲವಂತಿಕೆಯಲಿ ಪರುಶ ತೋರಲು ಬಿಡೆ

ತಲೆ ಜಡೆಗಟ್ಟಿ ತಪಸಿಯಾದರು ಬಿಡೆ

ಕುಲಹೀನನಾಗಿ ದನಗಾಯದರು ಬಿಡೆ

ಬಲು ಅರ್ಭಕನೆಂದು ಬತ್ತಲಾದರು ಬಿಡೆ

ಸಿಲುಕದೆ ವಾಜಿಯನೇರಿ ಓಡದಂತೆನ್ನ

ತಲೆ ನಿನ್ನ ಕಾಲಿಗೆ ಕಟ್ಟಿ ಕೆಡಹುವೆನೊ

ಖಳರ ವಂಚಿಕೆ ವೇಷಗಳು ಬಲ್ಲೆನೊ ನಾನು

ಸುಲಭದಿಂದಲಿ ಕಾಯೊ ಗೋಪಾಲವಿಟ್ಠಲ ॥ 7 ॥ 


 ಜತೆ 


ಗಿರಿಯನೆತ್ತುವನಿಗೆ ಹರಳು ಭಾರವೆ ದೇವ

ಪೊರಿ ಎನ್ನ ಕರುಣಾಳೆ ಗೋಪಾಲವಿಟ್ಠಲ ॥

*****