ಕಾಖಂಡಕಿ ಶ್ರೀ ಮಹಿಪತಿರಾಯರು
ದಾತ ನೀನೆ ಸ್ವಾಮಿ ಶ್ರೀಗುರುನಾಥ ವರ್ಮ ತೋರಿಕೊಡುವ ನಿಮ್ಮ ಧರ್ಮಗುಣ ಪ್ರಖ್ಯಾತ pa
ಧರೆಯೊಳು ಸರಿಯಗಾಣೆ ಗುರುಧರ್ಮದಿಂದಧಿಕ ಕರುಣಿಸಿ ಆನಂದದಿಂದ ತೋರುತಿಹ್ಯ ಬ್ರಹ್ಮಸುಖ ವರಮುನಿಗಳ ಪ್ರಿಯ ಶರಣಜನಪಾಲಕ ಪರಮ ಸುಪಥದೋರಿ ಹೊರೆವ ಪೂರ್ಣತಾರಕ 1
ಬಡವನಾಧಾರಿ ನೀನು ಒಡಿಯನಹುದೊ ನಿಶ್ಚಯ ಕೊಡುವ ಭಕ್ತಿ ಮುಕ್ತಿದಾತ ದೃಢಭಕ್ತರಾಶ್ರಯ ಒಡಲ ಹೊಕ್ಕಿಹೆ ನಿಮ್ಮ ಕಡೆಯಗಾಣಿಸೊ ನಮ್ಮಯ್ಯ ಪಿಡಿದು ನೀ ಎನ್ನ ಕೈಯ ಕೊಡು ತೋರಿ ನಿಮ್ಮ ಸೊಹ್ಯ 2
ಪೊಡವಿಯೊಳು ಕ್ಷಮೆ ಎನಗೆ ಕೊಡು ಕರುಣಾಕಟಾಕ್ಷ ನೋಡಿ ನಿಮ್ಮ ದಯದಿಂದ ನೀಡೊ ನಿಜ ಸುಭಿಕ್ಷ ಬಿಡದೆ ಎಂದೆಂದು ನೀನು ಮಾಡೊ ಸಂರಕ್ಷ ಮೂಢ ಮಹಿಪತಿಗಿನ್ನು ಪೂರಿಸೊ ಮನದಪೇಕ್ಷ 3
***