ವೆಂಕಟಾಚಲ ನಿವಾಸಾ-ಜಗದೀಶ
ಸಂಕಟ ಹರಿಸೋ ಶ್ರೀಶಾ ಪ
ಪಂಕಜಾಸನ ಪ್ರಮುಖ ಶಶಾಂಕಸುರವರಪೂಜಿತ
ಅಕಳಂಕಮಹಿಮ ಖಗಾಂಕ ಚಕ್ರಗದಾ
ಶಂಖಶ್ರೀಕರಕಂಜಧರಪಾಣೀ ಅ.ಪ
ಲೋಕನಾಥ ಲೋಕಬಂಧು-ದಯಾಸಿಂಧು
ಭಕುತರನಿಮಿತ್ತಬಂಧು-ಎಂದೆಂದೂ
ಭಕುತರ ಬೆಂಬಲನು ಎಂದೂ-ಇಂತೆಂದೂ
ಪಾಕಶಾಸನಪೂಜ್ಯ ಪಿನಾಕಿಪಿತ ಸುರಜೇಷ್ಠವಂದ್ಯ
ಏಕಮೇವ ನೀ ಕೈಬಿಡದೆ ಕರ್ಮ-
ಪಾಕಮಾಡಿಸೋ-ಕಾಲನಾಮಕ1
ಬಂಧಕಗಳ ತಂದೊಡ್ಡೀ-ಭಕುತರ ಮನ
ಒಂದೊಂದು ಪರಿ ಧೃಢಮಾಡಿ-ಪರಿಯುನೋಡಿ
ಬಂದ ಬಂಧವ ಹರಿಸಿ-ಹೃದ್ವಾಸೀ
ಹಿಂದುಮುಂದೂಕಾಣದ ಮಹ-
ಅಂಧಕಾರಣ್ಯದಲಿ ಸಲಹಿದೆ
ಬಂಧ ಮೋಚಕನಹುದೋ ಅನಾಥ
ಬಂಧು ನೀನೆಂದು ನಂಬಿದೇ 2
ಕರುಣಾಸಾಗರನೇ ನಿನ್ನಾ-ನಾ ನಂಬಿದೆ
ಸ್ಮರಣೆಯೊಂದನೆ ಪಾಲಿಸೋ ಈ ಜನುಮದೀ
ಪರಮಸಾಧನ ಕಾಣದೇ-ಪರಿತಪಿಸುವೇ
ನಿರುತ ಭವಸಂಕೋಲೆಯಾ ಕಡಿದು
ಪೊರೆಯುವುದೋ ಶ್ರೀ ವೆಂಕಟೇಶನೆ
ಸ್ಮರಿಪರಘ ಪರಿಹರಿಪ ಶ್ರೀ-
ಉರಗಾದ್ರಿವಾಸವಿಠಲ ಪ್ರಭೋ 3
****