ಶ್ರೀವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ
(ಭಾಗವತ ಧರ್ಮ ಪ್ರವರ್ತಕ ಮಾರ್ಗದಿಂದಲೆ ಶ್ರೀಹರಿಯ ಪ್ರಸನ್ನತೆ, ಬಿಂಬಾಪರೋಕ್ಷಕ್ಕೆ ಕಾರಣ)
ರಾಗ ಷಣ್ಮುಖಪ್ರಿಯ
ಧ್ರುವತಾಳ
ಇಂದಿರುಳು ಎನ್ನ ಹೃದಯ ಮಂದಿರದೊಳಗೆ ತಾನೆ
ನಿಂದಿರಗೋಸುಗ ಹರಿ ಇಂದಿರಾ ಸಹಿತ ಬಂದ
ಮುಂದಿರುವ ನೋಡಿ ಪಾಪ ವೊಂದಿರದಂತೆ ಕಳೆದ
ಹಿಂದಿರವು ನಾನಾ ಯೋನಿ ಬಂದಿರಲು ತಾನೆ ಅಲ್ಲಿ
ಪೊಂದಿರಗಲದೆ ಕಾಯಿದ ಅಂದಿರಾಸಗಳು ಬಾರದಂತೆ
ಚಂದಿರವದನ ವಿಜಯವಿಟ್ಠಲ ನಮಗಣ್ಣ ತ -
ಮ್ಮಂದಿರೋಪಾದಿಯಲ್ಲಿ ಸಂಬಂಧ ರಾಜ್ಯರಾಜ್ಯರಲ್ಲಿ ॥ 1 ॥
ಮಟ್ಟತಾಳ
ಅಂತರಿಯಾಮಿಯಲ್ಲಿ ನಿಂತು ಪೂಜಿಯಗೊಂಬ
ಸಂತತ ಸುಮನಸ ಸಂತತಿಗಳ ಕೈಯ್ಯಾ
ಚಿಂತಾಮಣಿ ಕಾಣೊ ಚಿಂತಿಸುವ ಜನಕೆ
ದಂತಿವರದ ನಮ್ಮ ವಿಜಯವಿಟ್ಠಲರೇಯಾ
ಕುಂತಿ ನಂದನಗೆ ಎಂತು ವೊಲಿದ ನೋಡು ॥ 2 ॥
ತ್ರಿವಿಡಿತಾಳ
ಕಮ್ಮೆಣ್ಣಿ ಕಸ್ತೂರಿ ಪುನಗು ಜವ್ವಾದಿ ಅ -
ಗಮ್ಯವಾಗಿದ್ದ ಕರ್ಪೂರ ಪಚ್ಚಗಂಧ
ಘಮ್ಮ ಘಮ್ಮ ಎಸೆವ ಅಗರು ಪರಿಮಳ ದ್ರವ್ಯ
ಸುಮ್ಮಾನದಲಿ ಪೊಳೆವ ದೇಹಕ್ಕೆ ಅನುಲೇಪ
ಒಮ್ಮಾಡಿಕೊಂಡಿಪ್ಪ ಪರಮ ಚರಿತ
ಚಮ್ಮಾಳಗಿಯ ಮೆಟ್ಟಿ ವಾರೆ ದುರುಬು ಕಟ್ಟಿ
ಆ ಮಹಾ ಕುಸುಮಗಳ ಜಾತಿವಪ್ಪೆ
ಹೆಮ್ಮೆಗಾರನು ತನ್ನ ಬಗಲಲ್ಲಿ ಇಟ್ಟಿದ್ದ
ಹೆಮ್ಮನೆ ಹಾಕಿದ ಕಠಾರಿಯ
ಧುಮ್ಮ ಗೈಸಿ ನಡೆವ ಹೆಜ್ಜೆಗಳ ಶೃಂಗಾರವ
ಉಮ್ಮೆಯರಸು ನೋಡಿ ತುತಿಸುತಿಪ್ಪ
ಹಮ್ಮಿನವರ ಗಂಡ ವಿಜಯವಿಟ್ಠಲ ಪರಬೊಮ್ಮ
ಬೊಮ್ಮಾಂಡದೊಡಿಯ ನಮ್ಮನೆ ಮನದೈವ ॥ 3 ॥
ಅಟ್ಟತಾಳ
ವೇದ ಶ್ರುತಿ ಶಾಸ್ತ್ರ ಓದಿದರೇನು
ಸಾಧುಗಳಿಗೆ ಸೋತು ನಡಿಯದನಕ
ಶೋಧಿಸಿ ವ್ರತಗಳಾಚರಿಸಿದರೇನು
ವೇದಾರ್ಥ ಜ್ಞಾನವೆ ಇಲ್ಲದನಕ
ಓದನ ಷಡುರಸ ಉಂಡರೆ ಏನು
ಮಾಧವಗೆ ಅರ್ಪಿಸದನ್ನಕಾ
ಮೇದಿನಿಯಲ್ಲಿ ತಿರುಗಿದರೇನು
ಯಾದವ ಕೃಷ್ಣನ್ನ ನೋಡದನ್ನಕಾ
ಸಾಧಿಸಿ ತಪವನೆ ಮಾಡಿದರೇನು
ಕ್ರೋಧವ ತೆಗೆದು ಈಡ್ಯಾಡದನಕ
ಶ್ರೀದೇವಿಯರಸನ್ನ ನೆನಸಿದರೇನು
ಮೋದತೀರ್ಥರಲ್ಲಿ ಕೂಡದನಕ
ನೀಧಾನದಲ್ಲಿ ಈ ಪರಿಯಲ್ಲಿ ನಡೆದರೆ
ಮೋದ ಪಾಥೇಯಾಗುವದು ವೈಕುಂಠಕ್ಕೆ
ಭೂಧರ ರೂಪ ಶ್ರೀವಿಜಯವಿಟ್ಠಲ ಹರಿಯ
ಪಾದವೆ ನೆರೆನಂಬು ಪುಣ್ಯವೆ ಉಂಬುವಿ ॥ 4 ॥
ಆದಿತಾಳ
ನೋಡು ಕಣ್ಣಿಲಿ ಆಡು ಜಿಹ್ವೆಲಿ
ಬೇಡು ಬಾಯಿಲಿ ಮಾಡು ಕೈಯಲ್ಲಿ ಸೇವೆ
ಶ್ರವಣ ತ್ರಾಡವಾಗಲಿ ಕರ್ಣಂಗಳಿಗೆ
ನಾಡೊಳಗೆ ಚರಿಸಿ ಯಾತ್ರೆಯ ಮಾಡು ಚರಣದಲಿ
ವಾಸನೆ ಮಾಡು ನಾಸಿಕದಲ್ಲಿ ನೀಡು ನಮಸ್ಕಾರ ದೇಹದಿ
ಈಡು ಇಲ್ಲದ ಹರಿಯನೆ ಕರದಾಡು ಪ್ರತಿದಿವಸದಲ್ಲಿ
ಕೇಡು ಮನವು ನಿನಗೆ ಬಾರದು ಪಾಡರಿದು ತಿಳಿದು ತಿಳಿ
ಗಾಢದೈವ ವಿಜಯವಿಟ್ಠಲ ಕಾಡುವ ದುರಿತಗಳ ಬಿಡಿಸಿ
ಗಾಢಗತಿಯನೀವ ಒಲಿದು ಬಾಡಲೀಯ ಬಂದ ಪುಣ್ಯಾ ॥ 5 ॥
ಜತೆ
ತರ್ಕೈಸಿ ಬಿಡದಿಪ್ಪ ವಿಜಯವಿಟ್ಠಲರೇಯನ
ಪಕ್ಕೆಯೊಳಗಿರು ನಿನಗಾವ ಭಯವಿಲ್ಲ ॥
****