ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ ಪ
ಅರ್ಥದಾಸೆಯಲಿ ಪೃಥ್ವಿಯೊಳಗೆ ಸುತ್ತಿಮತ್ತನಾಗಿ ಬಲು ಕೃತ್ಯಗಳನು ಮಾಡಿಅ
ಹರಿಯ ನೆನಯಲಿಲ್ಲ ಹರುಷದಿ ಗರುವ ಪುಟ್ಟಿತಲ್ಲಪರಮ ಮೂಢರಲಿ ನಿರುತ ಸಂಗವ ಮಾಡಿಗುರು ಹಿರಿಯರ ದಯ ದೊರೆಯದೆ ಸುಮ್ಮನೆ1
ಏನು ಪೇಳಲೇನು ಎನಗೆ ಹೀನ ಬಿಡದು ಮುನ್ನಶ್ವಾನಗಿಂತಲು ಬಲು ಮಾನಗೆಟ್ಟು ನಾದೀನನಾಗಿ ಮನೆಮನೆಗಳ ತಿರುಗಿ 2
ಭಾಗವತರ ಪಾದಕ್ಕೊಂದಿನ ಬಾಗಿ ನಡೆಯಲಿಲ್ಲರಾಗುರಂಗು ಭಕ್ತಿ ಭಾವದೊಳುಬೀಗಿ ಚೆನ್ನಕೇಶವನನು ನೆನೆಯದೆ 3
***
ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ' ll ಪ ll
ಶ್ರೀ ಪುರಂದರರು 'ಮಾನವ ಜನ್ಮ ದೊಡ್ಡದು... .' ಎಂದದ್ದು ನೆನಪಾದರೆ ಈ ಕನಕರ ಮಾತಿನ ಅರ್ಥ ತಿಳಿದೀತು. ಪ್ರತಿದಿವಸ ಎದ್ದಾಗ ಈ ಮಾತು ನೆನಪಾದರೆ ಮಾತ್ರ ಅಂದು ಕಿಂಚಿತ್ತಾದರೂ ಈ ಜನ್ಮದ ಸಾರ್ಥಕ್ಯವನ್ನು ಅರಿತು ಸತ್ಕರ್ಮಾನುಷ್ಠಾನ ಮಾಡಬಹುದು. ಇದಕ್ಕೂ ಮುನ್ನ ನಮ್ಮಿಂದ ಎಸಗುತ್ತಿರುವ ವ್ಯರ್ಥದ ಪರಿಯ ಪಟ್ಟಿಯನ್ನು ದಾಸರು ಕೊಟ್ಟು ಎಚ್ಚರಿಸುವರು.
ಅರ್ಥವಾಸೆಯಲಿ ಪೃಥ್ವಿಯಲಿ ಸುತ್ತಿ
ಮತ್ತನಾಗಿ ಬಲು ಕೃತ್ಯಗಳನು ಮಾಡಿ ll ಅ ಪ ll
' ಗುಣಾಹ ಕಾಂಚನಮಾಶ್ರಯಂತಿ' ಎಂಬಂತೆ, ಜೀವನದ ಎಲ್ಲಕ್ಕೂ ಅರ್ಥವೇ ಮೂಲವೆಂದು ಅದ್ಕಕ್ಕಾಗಿ ಸೆಣಸಾಟ. ಅರ್ಥಸಂಗ್ರಹಕ್ಕಾಗಿ ಏನೆಲ್ಲಾ ಮಾಡಲು ಸಿದ್ಧ. ಇದೆ ಜೀವನದ ಗುರಿ ಎಂದು ಮಾಡಬಾರದ್ದನ್ನೆಲ್ಲಾ ಮಾಡಲು ಮುಂದಾಗುವೆವು. ಇದನ್ನು ದಾಸರು ವ್ಯರ್ಥ, ಸಾಧನೆಗೆ ಅಡ್ಡಿ ಎನ್ನುವರು.
ಹರಿಯ ನೆನೆಯಲಿಲ್ಲ ಹರುಷದಿ ಗರುವ ಪುಟ್ಟತಲ್ಲ
ಪರಮ ಮೂಢರಲಿ ನಿರುತ ಸಂಗ ಮಾಡಿ
ಗುರು ಹಿರಿಯರ ದಯ ದೊರೆಯದೆ ಸಮ್ಮನೆ ll 1 ll
ದುರಹಂಕಾರದಿ ಸೊತ್ತಮರ ದ್ರೋಹವೆಸಗುತ್ತ ಕಾಲ ಕಳೆದೆ, ಸೋತ್ತಮರಸಂಗ ಮಾಡದೆ ದುರ್ಜನರ ಸಂಗಮಾಡಿದೆವು. ಉತ್ತಮರ ಅನುಗ್ರಹ ಹೇಗಾದೀತು.
ಏನು ಪೇಳಲೇನು ಎನಗೆ ಹೀನ ಬಿಡದು ಮುನ್ನ
ಶ್ವಾನಗಿಂತ ಬಲು ಮಾನಗೆಟ್ಟು ನಾ
ದೀನನಾಗಿ ಮನೆ ಮನೆಗಳ ತಿರುಗಿ ll 2 ll
ಅಯ್ಯೋ ! ಏನೆಂದು ಹೇಳಲಿ ದೇವ. ಥು ಎಂದರೂ ಬಿಡದೆ ಕಾಡುವ ಪ್ರಾಣಿ - ನಾಯಿ. ನನ್ನ ಬಾಳು ಅದರಂತಾಯಿತು. ಹೀಗಾಗಿ ಜೀವನ ವ್ಯರ್ಥವಾಗುತಿದೆ.
ಭಾಗವತರ ಪಾದಕ್ಕೊಂದಿನ ಬಾಗಿ ನಡೆಯಲಿಲ್ಲ
ರಾಗರಂಗು ಭಕ್ತಿ ಭಾವದೊಳು
ಬೀಗಿ ಚನ್ನಕೇಶವನನು ನೆನೆಯದೆ ll 3 ll - ಶ್ರೀಕನಕದಾಸರು
ನಮ್ಮ ಬಾಳು ವ್ಯರ್ಥವಾಗದೆ ಸಾರ್ಥಕವಾಗಲು, ಹೊಂದಿರಬೇಕಾದ ಸನ್ನಡತೆ, ಸದ್ವಿಚಾರ ಚಿಂತನ, ಸಜ್ಜನರ ಸಂಗ, ಭಗವಂತನಲ್ಲಿ ಅನುರಾಗ ಮುಂತಾದವು ಬಹಳ ಮುಖ್ಯವೆಂದ ಕನಕದಾಸರು ಅನುಭವದ ಮಾತುಗಳನ್ನಾಡಿರುವರು.
ಶ್ರೀಹರಿ ಕೀರ್ತನಿ ಸಾಧುಸಜ್ಜನರ ಮೃತಸಂಜೀವಿನಿ l - ಶ್ರೀಮ.
ಹರಿದಾಸ ಹೃದಯ ಗ್ರಂಥದಿಂದ
***