Showing posts with label ಕರಿರಾಜ ಕಂಧರ abhinava pranesha vittala ankita suladi ಗಜಾನನ ಸ್ತೋತ್ರ ಸುಳಾದಿ KARIRAJA KANDHARA GAJANANA STOTRA SULADI. Show all posts
Showing posts with label ಕರಿರಾಜ ಕಂಧರ abhinava pranesha vittala ankita suladi ಗಜಾನನ ಸ್ತೋತ್ರ ಸುಳಾದಿ KARIRAJA KANDHARA GAJANANA STOTRA SULADI. Show all posts

Sunday 8 December 2019

ಕರಿರಾಜ ಕಂಧರ abhinava pranesha vittala ankita suladi ಗಜಾನನ ಸ್ತೋತ್ರ ಸುಳಾದಿ KARIRAJA KANDHARA GAJANANA STOTRA SULADI

Audio by Mrs. Nandini Sripad

ಶ್ರೀ ಅಭಿನವ ಪ್ರಾಣೇಶವಿಠಲ ದಾಸಾರ್ಯ ವಿರಚಿತ 
ಶ್ರೀಗಜಾನನ ಸ್ತೋತ್ರ ಸುಳಾದಿ 

 ರಾಗ  ರೇವತಿ 

 ಧ್ರುವತಾಳ 

ಕರಿರಾಜ ಕಂಧರ ರಜತಾದ್ರಿ ಮಂದಿರ ।
ಉರಗ ಕಟಿಬಂಧನ ಮೂಷಿಕಶ್ಯಂದನ ।
ಗಿರಿರಾಜ ಸುತೆ ಪಾರ್ವತಿ ತನುಮೃದ್ಭವ ।
ಕರ ಚತುಷ್ಟಯ ದಶನ ಮೋದಕ ಪಾಶಾಂಕುಶ ।
ಧರ ಕುಂಕುಮಾಂಬರ ಲಂಬೋದರ ।
ಶೂರ್ಪಕರ್ಣನೆ ಮಂಗಳಾಂಗ ಭಸ್ಮಾಂಗನೆ ।
ಧರಿಪ ಭಂಜನ ಖಳ ಪೂರ್ವದೇವತೆಗಳ ।
ಹರಿ ವಿಶ್ವ ಅಭಿನವ ಪ್ರಾಣೇಶವಿಠಲನ ।
ಚರಣ ವಾರಿಜ ಭೃಂಗ ನತದಯಾಪಾಂಗ ॥ 1 ॥

 ಮಟ್ಟತಾಳ 

ಮೂರನೇ ಯುಗದಲ್ಲಿ ರುಕ್ಮಿಣಿ ದೇವಿಯಲಿ ।
ಚಾರುದೇಷ್ಣನೆಂಬ ನಾಮದಲವತರಿಸಿ ।
ಗೌರಿವರನ ವರದಿ ಕೊಬ್ಬಿದ ರಕ್ಕಸರ ।
ಕ್ರೂರಿಕರ್ಮಿಗಳನು ಶೌರಿಯಾಜ್ಞೆಯಿಂದ ।
ಮಾರಿಗುಣಿಸಿ ಭೂಮಿ ಭಾರವನಿಳುಹಿದ ।
ತಾರಕಾರಿ ಅನುಜ ನತಜನ ಸುರ ಭೂಜ ।
ಮಾರಪಿತ ಅಭಿನವ ಪ್ರಾಣೇಶವಿಠಲನ ।
ಭೂರಿ ಕರುಣಕೆ ಪಾತ್ರ ಶೌರಿ ಹರಿಪುತ್ರ ॥ 2 ॥

 ತ್ರಿಪುಟತಾಳ 

ಮಾಧವನ ದಯದಿಂದ ಆದಿಪೂಜೆಗೆ ಅರ್ಹ ।
ನಾದ ದೇವನು ನೀನು ಮೂರ್ಜಗದಿ ।
ಆ ದೇವ ದನುಜ ಮನುಜರೆಲ್ಲರು ನಿನ್ನ ।
ಆದಿಯಲ್ಲಿ ನಿನ್ನ ಪೂಜಿಪರು ।
ಬಾದರಾಯಣ ಪೇಳ್ದ ಪುರಾಣಂಗಳ ಬರೆದು ।
ಸಾಧು ಸಜ್ಜನರಿಗೆ ಮೋದವಿತ್ತೆ ।
ಶ್ರೀಧವ ಅಭಿನವ ಪ್ರಾಣೇಶವಿಠಲನ ।
ಪಾದ ಭಜನೆಯಿತ್ತು ಮೋದ ಕೊಡು ನಿತ್ಯ ॥ 3 ॥

 ಅಟ್ಟತಾಳ 

ಶ್ರೀರಾಮಚಂದ್ರನು ಸೇತುಮುಖದಿ ನಿನ್ನ ।
ಆರಾಧಿಸಿದನು ಸ್ಥಾಪಿಸಿ ಪೂಜಿಸಿ ।
ಆ ರಾವಣಾನುಜ ವಿಭೀಷಣನರ್ಚಿಸೆ ।
ಭೂರಿ ಲಂಕಾಪುರ ರಾಜ್ಯವ ಪಡೆದನು ।
ಶೌರಿ ಆಜ್ಞದಿ ನಿನ್ನ ಪೂಜಿಸಿ ಧರ್ಮಜ ।
ಭಾರತ ಯುದ್ಧದಿ ಜಯಶೀಲನಾದನು ।
ಕೌರವೇಂದ್ರನು ನಿನ್ನ ಭಜಿಸದ ಕಾರಣ ।
ಪಾರ ಬಂಧುಗಳೊಡನೆ ವಿಲಯವ ಪೊಂದಿದ ।
ವಾರಿಧಿಸುತ ನಿನ್ನ ಅಪಹಾಸ್ಯ ಮಾಡಿದ ।
ಕಾರಣ ಲೋಕದಿ ಕಳೆಹೀನನಾದನು ।
ಆರನೇ ಮಾಸದಿ ಸಿತ ಚತುರ್ಥಿಯ ದಿನ ।
ಹೇರಂಬನೇ ನಿನ್ನ ವರ್ಧಂತಿಯುತ್ಸವ ।
ಮೂರು ಲೋಕದಿ ಜನಪಾರ ಹರುಷದಿಂದ ।
ಆರಾಧಿಸಿ ನಿನ್ನ ಸೇವಿಸಿ ನಲಿವರು ।
ಮಾರಮಣನ ದಯ ವೆಂತುಂಟೋ ನಿನ್ನಲ್ಲಿ ।
ಪಾರುಗಾಣೆನು ನಿನ್ನ ಮಹಿಮೆಗೆ ನಮೋ ನಮೋ ।
ವಾರಿಚೋದರ ತಾನೇ ತತ್ವೇಶರೊಡಗೂಡಿ ।
ಸರುವ ಜೀವರೊಳಿದ್ದು ಕಾರ್ಯ ಮಾಡುವನೆಂಬ ।
ಚಾರು ಸುಜ್ಞಾನವ ಕರುಣಿಸು ಪಾಲಿಸು ।
ಬೇರೊಂದು ಬಯಸೇನು ಬಿಜ್ಜೋದರ ನಿನ್ನ ।
 ವಾರಿಜಾಕ್ಷಭಿನವ ಪ್ರಾಣೇಶವಿಠಲನ ।
ಚಾರು ಚರಣಗಳಲ್ಲಿ ಮನವ ನಿಲ್ಲಿಸು ಜೀಯಾ ॥ 4 ॥

 ಆದಿತಾಳ 

ಸಿದ್ಧಿವಿನಾಯಕ ವಿದ್ಯಪ್ರದಾಯಕ ।
ಸದ್ಯೋಜಾತನ ಮುದ್ದು ಮೋಹದಸುತ ।
ಬದ್ಧವಿಷಯದಿಹ ಬುದ್ಧಿಮನಗಳನು ।
ತಿದ್ದಿ ಜ್ಞಾನ ಭಕುತಿಗಳಿತ್ತು ಹರಿಪದ ।
ಪದ್ಮಯುಗದಿ ಸದಾ ಮಗ್ನವಾಗಿರಿಸಯ್ಯ ।
ಬದ್ಧಾಂಜಲಿಯಾಗಿ ಪ್ರಾರ್ಥಿಪೆ ಗಗನೇಶಾ ।
ಮಧ್ವಾಂತರ್ಗತ ಹರಿ ಗುಣ ಗಾಯನ ।
ಪದ್ಯ ಸುಳಾದಿಗಳಿಂದ ಮಾಡಿ ಪಾಡುತ ।
ಮಧ್ವಪನೊಲಿಸಿದ ದಧಿಶಿಲೆ ನಿಲಯನೆ ।
ಮಧ್ವಪತಿ ಅಭಿನವ ಪ್ರಾಣೇಶವಿಠಲನ ।
ಪದಪದ್ಮಗಳಲ್ಲಿ ದೃಢಭಕ್ತಿ ನೀಡು ॥ 5 ॥

 ಜತೆ 

ಮೀನಾಂಕಜಿತನೆ ಸುಜ್ಞಾನ ಪಾಲಿಸು ಜೀಯಾ ।
 ಮಾನದಭಿನವ ಪ್ರಾಣೇಶವಿಠಲನ ಪ್ರೀಯಾ ॥
*******