ಬಾಗಿ ಬೇಡಿರೋ ಗುರು ರಾಘವೇಂದ್ರರ
ಯೋಗಿವರ್ಯರಾ ಭವರೋಗಹರಿಪರ ಪ
ಭುವ್ಯಬುಧರಿಗೆ ದಿವ್ಯಭವ್ಯಚರಿತೆಯ
ತವಕದಿಂದಲಿ ಬೆಳಗಿದವರ ಪಾಡಿರೋ 1
ಕರೆದುಕಂಬದಿ ನರಹರಿಯತೋರ್ದರ
ಪರಮಭಕುತಿಯ ಧರಣಿಧರೆಗೆಸಾರ್ದರ 2
ಸೋಸಿನಿಂದಲೀ ಯತಿವ್ಯಾಸರಾದರ
ರಾಶಿಗ್ರಂಥವ ರಚಿಸಿ ಸಂತೋಷಬೀರ್ದರ 3
ಗುರುಸುಧೀಂದ್ರರಾ ವರಕರಸುಜಾತರ
ಹರಿಯಪಾದವೆ ತಮ್ಮಸಿರಿಎಂದರಿತರ 4
ತುಂಗತೀರದಿ ಮೆರೆವಮಂಗಳಾಂಗರ
ರಂಗನಂಘ್ರಿಯ ಅಂತರಂಗಭಜಕರ 5
ಮೋದತೀರ್ಥರ ಮತವಸಾಧಿಸುವರ
ಸಾಧುವೃಂದಕೆ ಸದ್ಬೋಧೆಗೈವರ 6
ಇಂದುನೋಡಿರೊ ಇವರಚಂದವೈಭವ
ಎಂದುಕಾಣದ ಆನಂದದನುಭವ 7
ದೇಶದೇಶದ ಜನರು ದಾಸರಾಗುತ
ಸೂಸುಕರುಣದ ನಿಧಿಯ ರಾಶಿಕಂಡರು 8
ಮಾಡಬಾರದ ಕರ್ಮ ಮಾಡಿದವರು
ಬೇಡಿ ಬಾಗಿ ಕೊಂಡಾಡುತೀರ್ಪರು 9
ಮದಡನಾದರು ಇವರ ಮುದದಿ ಬೇಡಲು
ಬುಧನು ಆಗುವ ಶುಭದ ಉದಯ ನೋಡುವ 10
ಭಕ್ತಿಯಿಂದಲಿ ಮೂಲಮೃತ್ತಿಕಾಜಲ
ನಿತ್ಯಸೇವಿಪ ಜನಕೆ ಮುಕ್ತಿಯೇಫಲ 11
ಭೂತಗಣಗಳು ಈಖ್ಯಾತಿಮಹಿಮರ
ಪಾದದುದುಕಕೆ ನಡುಗಿ ಸೋತುಬೀಳ್ವರು 12
ರಾಘವೇಂದ್ರರ ನಾಮ ರೋಗಭಯಹರ
ಜಾಗುಮಾಡದೆ ಪೀಡೆ ನೀಗಿಕೊಳ್ಳಿರೋ 13
ಪುತ್ರಕಾಮರೂ ಕರಗಳೆತ್ತಿ ಬೇಡಿರೋ
ಮತ್ತೆ ಫಲಗಳ ರಾಶಿ ಇತ್ತ ನೋಡಿರೋ 14
ಚರಣಕಮಲಕೆ ಎರಗಿ ಶಿರವಬಾಗುವ
ಶರಣಜನರಿಗೆ ಸುರತರುವು ಆಗುವ 15
ಶುಭದಗುಣನಿಧಿ ಭುವಿಗೆ ಅಭಯವಾರಿಧಿ
ನಭದಮಣಿಸಮ ಪ್ರಭೆಯ ವಿಭವದೂಪಮಾ 16
ಕರುವು ಕರೆದರೆ ಬರುವ ತುರುವ ತೆರದಲಿ
ಶರಣರಿಗೆ ದೊರೆ ಮರುಗಿ ಬರುವ ಭರದಲಿ 17
ಗಳಿಸಿ ತುಂಬಿದ ಪುಣ್ಯಫಲದ ರಾಶಿಯು
ಹೊಳೆಯುತಿರ್ಪುದು ಪಾಲ್ಜಲಧಿಯಂದದಿ 18
ಕರುಣಸಾಗರನೆಂಬ ಬಿರುದು ಧರೆಯೊಳು
ಮೆರೆಯುತಿಪ್ಪುದು ರವಿಯ ಕಿರಣದಂದದಿ 19
ಯೊಗಿವರ್ಯ ಶ್ರೀ ರಾಘವೇಂದ್ರರ
ಭಾಗ್ಯಭೋಗಕೆ ಇಂದು ಯೋಗ್ಯರಾಗಿರೋ 20
ಅಪ್ಪಣಾರ್ಯರು ಇವರುಒಪ್ಪುವಂದದೀ
ಒಪ್ಪಿಸಿರುವರು ಕವನದಿರ್ಪಸ್ತುತಿಯನು 21
ಗುರುಕಟಾಕ್ಷವ ಪಡೆದು ಸರಳಸ್ತೊತ್ರವ
ಪಿರಿಯರೆಲ್ಲರೂ ಪಠಿಸಿ ಹರುಷ ಪಡುವರು 22
ಮಣಿದುಬೇಡಿರೋ ಕುಣಿಕುಣಿದುಪಾಡಿರೋ
ಎಣಿಕೆಯಿಲ್ಲದ ವರಗಳೆಣಿಸಿಗಳಿಸಿರೊ 23
ದೋಷದೂರ ಶ್ರೀ ರಾಘವೇಂದ್ರರ
ಈಶನೆಂಬರೂ ಸಂತೋಷಭರಿತರು 24
ಉದಯಕಾಲದಿ ಎದ್ದು ಸದಮಲಾತ್ಮರು
ಇದನು ಪಠಿಸಲು ದಿವ್ಯಪದವಿ ದೊರೆವುದು 25
ನಿತ್ಯದಲ್ಲಿ ಈ ಸ್ತುತ್ಯಗೀತೆಯ
ಎತ್ತಿಪಾಡಲು ಸರ್ವಸಿದ್ಧಿನಿಶ್ಚಯ 26
ಮೋದದಿಂದಲಿ ಇದನ್ನು ಓದಿ ಪೇಳ್ದರೆ
ಸಾಧುಮಾರ್ಗ ಸದ್ಬೋಧೆ ದೊರೆವುದು 27
ಘನ್ನಗುರುಗಳ ಪಾವನ್ನಸ್ಮರಣೆಯ
ಮುನ್ನಮಾಡಿರೊ ಪರಮಧನ್ಯರಾಗಿರೋ 28
ಆದಿದೇವ ಶ್ರೀಖಾದ್ರಿದೇವನ
ಪಾದದೂತನ ಧ್ಯಾನ ಮೋದಸಾಧನಾ 29
***
ರಾಗ: [ಗೋಪಿಗೀತೆ ಧಾಟಿ/ ಸೌರಾಷ್ಟ್ರ] ತಾಳ: [ತಿಶ್ರನಡೆ] (raga tala may differ in audio)