by yadugiriyamma (1820+)
ಸುಮ್ಮನಿರಬಾರದೆ ಮನವೆ ನೀನು ಸುಮ್ಮನಿರಬಾರದೆ
ಹಮ್ಮುಅಹಂಕಾರ ಹೆಮ್ಮೆಗಳೆದು ಪನ್ನಗಾದ್ರಿಯ ಧ್ಯಾನಮಾಡುತ್ತ ಪ
ಚಿಂತೆಯನು ತೊರೆದು ಮನವೆ ಲಕ್ಷೀಕಾಂತನೊಳು ಬೆರೆದು
ಅಂತರಂಗದಿ ಕಂತುಜನಕನ ಸಂತತವಿಟ್ಟು ಪಂತವನು ಬಿಟ್ಟು 1
ಆಸೆಯನು ತೊರೆದು ಮನವೆ ನೀ ಶ್ರೀಶನೋಳು ಬೆರೆದು
ಘಾಸಿಯಾಗದೆ ವಾಸುದೇವನ ದಾಸನಾಗಿ ಉಲ್ಲಾಸದಿಂದಲೆ 2
ಯಾರು ಬೈದರೇನು ಈ ದೇಹ ಇನ್ಯಾರು ಕೊಯ್ದರೇನು
ಘೋರಮಾಯೆ ದೂರಮಾಡಿ ನೀ ವಾರಿಜಾಕ್ಷನ ಪಾದವನು ಸೇರಿ 3
ಎಲ್ಲರಲ್ಲಿ ವಾಸುದೇವನಿಲ್ಲದಿಲ್ಲೆನುತ ಹುಲ್ಲು ಹುಳುವಿನೊಳು
ಎಲ್ಲ ಹರಿಯೆಂದು ಪುಲ್ಲನಾಭನ ಸೊಲ್ಲು ಪಾಡುತ್ತ 4
ಸೃಷ್ಟಿಯೊಳಗಧಿಕ ಮೂಡಲಗಿರಿ ಬೆಟ್ಟದೊಳಗಿರುವ ದಿಟ್ಟವೆಂಕಟನ
ಮುಟ್ಟಿ ಭಜಿಸಿ ನೀ ಮಾಡಿದಷ್ಟು ಪಾಪವ ನಷ್ಟ ಮಾಡುತ್ತ 5
****