Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ
ಶ್ರೀ ಸುಮಧ್ವವಿಜಯ ಸ್ತೋತ್ರ ಸುಳಾದಿ
ರಾಗ ಹಂಸಾನಂದಿ
ಧ್ರುವತಾಳ
ಮುನಿಗಳ ಮಸ್ತಕರತುನ ಭಾರತಿರಮಣ
ತೃಣಮೊದಲಾದ ವ್ಯಾಪ್ತನೆ ಪಾವನ ಶರೀರ
ಗುಣನಿಧಿ ಪವಮಾನ ಪವಮಾನ ಪಂಚಪರಣ
ಅಣುಮಹತ್ತು ರೂಪನೆ ಸನಕಾದಿಗಳ ಪ್ರಿಯ
ವನಜಜಾಂಡವನ್ನು ತಾಳವನೆ ಮಾಡಿ ಬಾರಿಸುವ
ಘನ ಸಮರ್ಥನೆ ಸಜ್ಜನಪಾಲ ಶುಭಲೋಲ
ಅನಿಲ ಪ್ರಧಾನವಾಯು ಹನುಮ ಭೀಮ ಮಧ್ವ -
ಮುನಿ ಜ್ಞಾನದಾತ ಕರಣಾಭಿಮಾನಿಗಳ
ಗಣನೆ ಮಾಡದೆ ಗೆದ್ದ ಅನಿಮಿತ್ತ ಬಂಧು ಜಗ -
ಜ್ಜನಕ ಚತುರಹಸ್ತ ಮಿನಗುವ ಗದಾಪಾಣಿ
ದನುಜರ ಸದೆಬಡೆದ ರಣರಂಗಧೀರ ಶೂರ
ಇನ ಮೊದಲಾದ ಠಾವಿನಲಿ ಸರ್ವದಾ ತೇಜ
ವನಜಾರಿಕುಲಾಧೀಶ ಮನಮುದ್ದು ಪೂರ್ಣಪ್ರಜ್ಞ
ಪ್ರಣತಾರ್ತಿಹರ ಆರ್ಯ , ಅನುಗಾಲ ಜಗದ್ಗುರು
ಜನುಮ ಜನುಮ ಸಾಧನ ಮಾಡಿಸುವ ಕರುಣಿ
ನೆನೆದವರಿಗೆ ಚಿಂತಾಮಣಿ ಸುರಧೇನು ತರುವೆ
ಪ್ರಣವ ಮೂರುತಿ ನಮ್ಮ ವಿಜಯವಿಟ್ಠಲ ನಾರಾ -
ಯಣನಂಘ್ರಿ ಗುಪ್ತದಲ್ಲಿ ಮನದೊಳೆಣಿಪ ಮೌನಿ ॥ 1 ॥
ಮಟ್ಟತಾಳ
ನಿನ್ನಾಧೀನವೆ ಲೋಕ ನೀ ಹರಿಯಾಧೀನ
ನಿನ್ನ ಪ್ರೇರಣೆ ಜಗಕೆ ನಿನಗೆ ಪ್ರೇರಣೆ ಹರಿ
ನಿನ್ನಾಧಾರ ನಮಗೆ ನಿನಗಾಧಾರ ಹರಿ
ನಿನ್ನ ಬೆಳಗು ಜಗಕೆ ನಿನಗೆ ಬೆಳಗು ಹರಿ
ನಿನ್ನ ಧ್ಯಾನ ನಮಗೆ ನಿನಗೆ ಹರಿ ಧ್ಯಾನ
ನಿನ್ನ ಸ್ತೋತ್ರವೆ ನಮಗೆ ನಿನಗೆ ಹರಿಯ ಸ್ತೋತ್ರ
ನಿನ್ನ ಕಾಣೆವು ನಾವು ನೀ ಹರಿಯನು ಕಾಣೆ
ನಿನ್ನ ಮಾಯವು ನಮಗೆ ನಿನಗೆ ಹರಿಮಾಯ
ನಿನ್ನೊಳಗೆ ಹರಿ ನೀನು ಹರಿಯೊಳಗೆ
ಅನ್ಯೋನ್ಯವಾಗಿ ಭಕುತರ ಮನದಲ್ಲಿ
ಕಣ್ಣಿಗೆ ಪೊಳವುತ್ತ ಪೊಳೆದಾಡುವ ಪ್ರಾಣ
ಚಿಣ್ಣಾವತಾರ ಶ್ರೀವಿಜಯವಿಟ್ಠಂಗೆ ಅ -
ಚ್ಛಿನ್ನ ಭಕ್ತನಾದ ಸನ್ಯಾಸಿಗಳೊಡೆಯ ॥ 2 ॥
ರೂಪಕತಾಳ
ಕಲಿ ಮೊದಲಾದ ಖಳರು ಸತ್ಕರ್ಮ ಮಾಡುವರ
ಹಳಿದು , ಯೋಚನೆ ಮಾಡಿ ಮಣಿಮಂತನೆಂಬುವನ
ಬಲವಂತನಹುದೆಂದು ಕರೆದು ಉಪದೇಶಿಸಿ
ಇಳಿಯೊಳು ಜನಿಸಿ ಭೇದಾರ್ಥಜ್ಞಾನವೆಲ್ಲ
ಅಳಿದು ಸಜ್ಜನರನ್ನು ಮಂದಮತಿಗಳ ಮಾಡಿ
ಕುಲಮರಿಯಾದೆಗಳ ಕೆಡಿಸಿ ಜಗವ
ಬಲುಮಿಥ್ಯವೆಂದು ಸ್ಥಾಪಿಸಿ ಜೀವೇಶಗೆ ಐಕ್ಯ
ತಿಳಿಸಿ ಪರಗತಿಯ ಮಾರ್ಗ ತೋರದಂತೆ
ಹೊಲಗೆಡಿಸಪೋಗೆಂದು , ಮನ್ನಿಸಿ ಮುದದಿಂದ ಪೇ -
ಳಲು , ಹರುಷವ ತಾಳಿ ಖಳನು , ಮನ -
ದೊಳು ನೆನೆದಾನಿಲನೆ ನಿನ್ನ ಅಂದಿನ ವೈರ
ವಳಿತೆಂದು ಕೈಕೊಂಡು ವಿಜಯವಿಟ್ಠಲನ್ನ
ಸುಲಭಭಕ್ತರ ಮತಿ ಅಳಿದುಬಿಡುವೆನೆಂದು ॥ 3 ॥
ಝಂಪಿತಾಳ
ಚರಣಡಿ ಯಂಬೊ ಗ್ರಾಮದಲಿ ವಿವಶಳಾಗಿ
ಚರಿಸುವ ಸ್ತ್ರಿಯಳಲ್ಲಿ ಜನಿಸಿ ಬಂದು
ದುರುಳ ಸಂಕರನೆಂಬೋ ನಾಮದಲ್ಲಿ ಧರೆಯೊಳಗೆ
ಮೆರದು ಮನೋವಾಚಕಾಯದಲ್ಲಿ ತಾನಾಗಿ
ಎರಡೆಂಬೊ ವಾಕ್ಯವನು ಪೇಳದಲೆ
ತಿರುಗಿದನು ಬಹುಬಗೆ ದುಃಶಾಸ್ತ್ರವನೆ ರಚಿಸಿ
ಶಿರಬಲಿತು ಧರ್ಮಗಳ ನಿರಾಕರಿಸಿ
ಪರಮಾತ್ಮಗೆ ನಿರ್ಗುಣ ಪೇಳಿ ಉತ್ತಮ
ಪರವೆಲ್ಲ ಜೀವರಲ್ಲಿ ಸಾಧಿಸುತ್ತ
ಇರಲು , ಸಜ್ಜನರೆಲ್ಲ ಹಸಗೆಟ್ಟು ಕೇವಲ
ಮೊರೆಯಿಡಲು ಹರಿಕರುಣದಿಂದ ನೀನು
ಸುರರು ಪೊಗಳಲಾಗಿ ವಿಜಯವಿಟ್ಠಲನಾಜ್ಞಾ
ಶಿರದಲ್ಲಿ ಧರಿಸಿ ಅವತರಿಸಿದ ವೃಕೋದರ ॥ 4 ॥
ತ್ರಿಪುಟತಾಳ
ಜನಿಸಿದೆ ಪರಶುಕ್ಲತ್ರಯನೆ ವೇಗದಿ ನಡು
ಮನೆಯ ಬ್ರಾಹ್ಮಣ ನಿಜ ನಾರಿಯಲಿ
ತನಯ ಲೀಲೆಯ ತೋರಿ , ಹುರಳಿ ಗುಗ್ಗರಿ ಮೆದ್ದು
ಜನನಿಗಾಶ್ಚರ್ಯವ ಮಿಗಿಲೆನಿಸಿ
ಕುಣಿದಾಡಿ ಬಲಿವರ್ದನನ ಸಂಗಡ ಪೋಗಿ
ಹುಣಿಸೆ ಬೀಜದಲಿ ಸಾಲವನೆ ತಿದ್ದಿ
ತೃಣಮಾಡಿ ಶಿವಶಾಸ್ತ್ರಿಯನು ಸೋಲಿಸಿ , ಆ -
ಕ್ಷಣದಲಿ ಯತಿಯಾದೆ ಜನಕನಿಂದ
ಫಣಿಯಾದ್ಯರಿಗೆ ಗುರುವಾದ ನಾರಿಯ ರಮಣ
ಅನುಸರಿಸಿ ಅಚ್ಯುತ ಪ್ರೇಕ್ಷನಲ್ಲಿ
ವಿನಯದಲಿ ಪೋಗಿ ನಿಯಮವಾಗಿ ಶಿಷ್ಯ -
ತನ ಪಡದಿ ಮಧ್ವಾಖ್ಯ ನಾಮದಲ್ಲಿ
ಅನಿಮಿಷ ನದಿ ದಾಟಿ ಭೂಪತಿಯ ವಂಚಿಸಿ
ಬಿನಗುಚೋರರನ್ನು ಮೋಸಗೊಳಿಸಿ
ಮನೋವೇಗದಲಿ ಮಹಾಬದರಿಕಾಶ್ರಮದಲ್ಲಿ
ದನುಜಾರಿ ಇರೆ ಪೋಗಿ ನಮಿಸಿ ವಿದ್ಯಾ
ಅನುವಾಗಿ ಕಲಿತು ಸರ್ವದಾ ಅಲ್ಲಿದ್ದ ಸರ್ವ -
ಮುನಿಗಳಿಂದ ಪೂಜೆಗೊಂಡು ತೆರಳಿ
ಜನುಮರಹಿತ ವ್ಯಾಸ ಮುನಿಯನ್ನೆ ಕಂಡು ವಂ -
ದನೆ ಮಾಡಿ , ಎಂಟು ಮಳಲ ಮುಟ್ಟಿಗೆ -
ಯನು ಪಡೆದು ಬಂದೆ , ರಜತಪೀಠಪುರದಲ್ಲಿ
ಇನನಂತೆ ಪೊಳೆವ ಆನಂದತೀರ್ಥ
ಗುಣಪೂರ್ಣ ಅನಂತೇಶ್ವರ ವಿಜಯವಿಟ್ಠಲನ್ನ
ಅನುದಿನ ನೆನೆಸುವ ವೈಷ್ಣವಾಚಾರ್ಯ ॥ 5 ॥
ಅಟ್ಟತಾಳ
ವಸುಧಿಯೊಳಗೆ ರಕ್ಕಸ ರೂಪ ಸಂಕರ
ಮಸದು ಮತ್ಸರಿಸಿ ತಾಮಸಶಾಸ್ತ್ರಗಳ ನ್ಯಾವ -
ರಿಸಿ , ನಿರ್ಮಲಜ್ಞಾನ ಪುಸಿಯೆಂದು ವೊರೆದು , ವೊ -
ಲಿಸಿಕೊಂಡು ಅವರಿಗೆ ಭಸುಮವ ಬಡಿಸಿ ವೆ -
ಕ್ಕಸನಾಗಿರಲಿತ್ತ ಶ್ವಸನಾವತಾರವೆ , ನಸುನಗುತ್ತ ವೇಗ
ದಶ ಪ್ರಕರಣ ರಂಜಿಸುವ ಸೂತ್ರವೆ ನಾಲ್ಕು
ದಶ ಉಪನಿಷತ್ ಎಸೆವ ಋಗ್ಗಾಗೀತ
ಹಸನಾದೆರಡು ಭಾಷ್ಯ ತ್ರಿಸ ತಾತ್ಪರ್ಯವು
ಎಸಳು ಯಮಕಭಾರತಾಗಮ ಸದಾಚಾರ
ಕುಶಲಸ್ಮೃತಿ , ದ್ವಾದಶ ಸ್ತೋತ್ರ , ಕೃಷ್ಣ ಸು -
ರಸಮಹಾರ್ಣವ , ಮಿಸಣಿಪ ತಂತ್ರಸಾರ
ವಸುದೇವಸುತ ಜನಿಸಿದ ನಿರ್ಣಯ , ಮತ್ತೆ
ಋಷಿಕಲ್ಪ , ನರಸಿಂಹ ಪೊಸಬಗೆ ನಖಸ್ತುತಿ
ನಿಶಿಕರನಂತೆ ಶೋಭಿಸುವ ಮೂವತ್ತೇಳು
ರಸಪೂರಿತವಾದ ದರುಶನಗ್ರಂಥಗಳ ರ -
ಚಿಸಿ , ಏಕವಿಂಶತಿ ಅಸುರ ಭಾಷ್ಯಗಳ ಖಂ -
ಡಿಸಿ ವಾದಿಗಳ ಭಂಗಿಸಿ , ಸೋಲಿಸಿ , ಚತು -
ರ್ದಶ ಲೋಕಕ್ಕೆ ದೈವ ಝಷಕೇತುಪಿತನೆಂದು
ಬೆಸಸಿ ಡಂಗುರವ ಹೊಯಿಸಿ ಬಿರುದನೆ ಎತ್ತಿ
ಶಿಶುಜನರ ಉದ್ಧರಿಸಿ , ಪೊಗಳಿಸಿಕೊಂಡು
ದಶದಿಕ್ಕಿನೊಳು ಕೀರ್ತಿಪಸರಿಸಿ ಮೆರೆವ ವಿ -
ಕಸಿತ ವದನ , ತ್ರಿದಶರ ಮನೋಹರ
ಹಸಿದವನಂತೆ ಭುಂಜಿಸಿದೆ ಕದಳಿ ಫಲ
ವಶವೆ ಪೊಗಳಲು, ಮಾನಿಸಗೆ ನಿಮ್ಮ ಮಹಿಮೆ
ಶಶಿಕೋಟಿ ಲಾವಣ್ಯ ವಿಜಯವಿಟ್ಠಲನಂಘ್ರಿ
ವಶ ಮಾಡಿಕೊಂಡು ಸಂತಸಜ್ಞಾನದಾತ ॥ 6 ॥
ಆದಿತಾಳ
ದುರುಳಮೋಹಕ ಶಾಸ್ತ್ರಗಿರಿಗೆ ಕುಲಿಶನೆನಿಸಿ
ತರಿದು , ಸಿದ್ಧಾಂತಮತ ಪರಮತತ್ವವೇ ತಾ -
ತ್ಪರ್ಯ ಗುಣತಾರತಮ್ಯ ಅರುಹಿ , ಮುಕ್ತಿಗೆ
ದಾರಿ ಕರೆದು , ಕರದೊಳು ತೋರಿ
ಎರಡಾರುಪುಂಡ್ರ ಮುದ್ರೆಧರರ ಮಾಡಿ ಪಾ -
ಮರರ ಪಾಲಿಸಿ ತಾಮಸರ ತಮಸಿಗೆ ಅಟ್ಟಿ
ಸಿರಿ ಪತಿ ಪ್ರೀತಿ ಬಡಿಸಿ ; ಶರಧಿಯೊಳಗೆ ಹಡಗ
ಬರುತ ನಿಲ್ಲಲು ನೋಡಿ , ಕರೆದು ಗೋಪಿಚಂದನ
ಕರಣೆ ತೆಗೆದುಕೊಂಡು ಭರದಿ ದ್ವಾದಶ
ಸ್ತೋತ್ರವ ಮಾಡುತ ಅದರ ಒಳಗುಳ್ಳ ಸೋ -
ದರಮಾವನವೈರಿಯ ನಿರೀಕ್ಷಿಸಿ , ಮಧ್ವ -
ಸರೋವರದಲ್ಲಿ ತೊಳದು ನಿಂದಿರಿಸಿ ರಜತಪೀಠ
ಫುರದಲ್ಲಿ ಉತ್ಸಾಹದಿ ಸರಸದಲ್ಲಿ ಪೂಜಿಸಿ
ತರುವಾಯರ್ಚನಿಗೆ ನಾಲ್ಕೆರಡು ಸನ್ಯಾಸಿಗಳ
ಕರಕಮಲದಿಂದ ಪಡೆದೆ , ವರಮಧ್ಯ ತಾಳ ಮಠ
ನರಸಿಂಹ - ಸುಬ್ರಹ್ಮಣ್ಯ ಪರಮ ಕ್ಷೇತ್ರದಲಿ ಇ -
ಬ್ಬರು ಯತಿಗಳ ಇಟ್ಟು ಪರಿ ಪರಿಯಲಿಂದ ಈ ಮೂರು
ಕ್ಷೇತ್ರ ವಾಸರವೊಂದು ಬಿಡದೆ ಸಂಚರಿಸಿದ ಮಹಕಾಯ
ಸರಸಿಜನಾಭಮುನಿ ನರಹರಿ ಮಾಧವ
ವರ ಅಕ್ಷೋಭ್ಯ , ಏಕೋದರ ವಿಷ್ಣುತೀರ್ಥ , ಮಹಾ -
ಶರಣ ತ್ರಿವಿಕ್ರಮಾರ್ಯ ದುರಿತನಾಶನ ಭಗವ -
ತ್ಪರನಾದ ಸತ್ಯತೀರ್ಥ ತರುವಾಯ ನಾರಾಯಣಾ -
ಚಾರ್ಯಯೆಂಬೊ ಶಿಷ್ಯರನ ಪಡೆದು ಅ -
ವರ ಗುರುಭಾವನೆಯಿದ್ದಿನಿತು
ಅರುಹಿ , ಮೂಲರಾಮನ್ನ ಚರಣವನ್ನ ಭಜಿಸಿ
ಧರೆಯೊಳಗಿಟ್ಟು , ಇಹ - ಪರದಲ್ಲಿ ಬೋಧವೆಂಬೊ
ಚರಿತೆಯನ್ನು ತೋರಿಸಿ , ಮರಳೆ ಸುರರು ಕುಸುಮ
ವರುಷವ ಕರೆಯಲು , ಬದರಿಗೆ ಪೋಗುತ ದಿವ್ಯ
ಕರಬೀಸಿ , ಸತ್ಯತೀರ್ಥರ ತಿರುಗಿ ಸ್ಥಳಕಟ್ಟಿದೆ
ನಿರುತ ವೇದವ್ಯಾಸನ್ನ ಕರುಣವನೆ ಸಂಪಾದಿಸಿ
ವರವಿದ್ಯ ವೋದುವ ಪರಮಗುರುವೆ ಸತ್ಯ
ಕರದಂಡವನ್ನು ತಿರುಹಿ ನೆಲ್ಲು ಬೆಳೆವ
ಪರಿ ಮಾಡಿದ ಶಕ್ತ ಪರಮ ಜ್ಞಾನಿ ವಿರಕ್ತ
ಎರಗುವೆ ನಿನ್ನ ಲೀಲೆ ಅರಿತಷ್ಟು ಪೇಳಿದೆ
ಹಿರಿದು ವರ್ಣಿಸೆ ನಮ್ಮ ಹಿರಿಯರು ಬಲ್ಲರಯ್ಯ
ತರಳತನದಲಿಂದ ಗಿರಿಯ ಧುಮುಕಿದವನೆ
ಸರಿಗಾಣೆ ನಿನಗೆಲ್ಲಿ ಸರಿಗಾಣೆ ನಿನಗೆಲ್ಲಿ
ಎರವು ಮಾಡದೆ ಎನ್ನಂತರಯಾಮಿಯಾಗಿಪ್ಪನೆ
ಪರಿಪಾಲಿಸು ನಿಜ ಶರಣರೊಳಗೆ ಇಟ್ಟು
ಜರಮರಣ ರಹಿತ ವಿಜಯವಿಟ್ಠಲನ್ನ
ಎರಡೊಂದವತಾರ ಧರಿಸಿದ ಧರ್ಮಶೀಲ ॥ 7 ॥
ಜತೆ
ಅದ್ವೈತಮತ ಕೋಲಾಹಲ ರಿಪುಮಸ್ತಕ ಶೂಲ
ಮಧ್ವರಾಯ ವಿಜಯವಿಟ್ಠಲನ್ನ ಮಹಾಪ್ರಿಯ ॥
*******
ಲಘುಟಿಪ್ಪಣಿ :
ಧ್ರುವತಾಳದ ನುಡಿ :
ತೃಣಮೊದಲಾದವ್ಯಾಪ್ತನೆ =
ಮುಖ್ಯಪ್ರಾಣೋಮಹಾನೇಷ ಯೇನ ವ್ಯಾಪ್ತಂ ಚರಾಚರಂ
ತಸ್ಮಿನೋತಮಿದಂ ಸರ್ವಂ ಚೇತನಾಚೇತನಾತ್ಮಕಂ ॥
ಯಥಾಸೂತ್ರೇ ಮಣಿಗಣಾ ರಥನಾಭಾವರಾಯಥಾ
ಯತಃ ಸರ್ವಂ ಜಗದ್ವಾಪ್ಯ ತಿಷ್ಠತಿ ಪ್ರಾಣ ಏವತು ॥
( ಸತ್ತತ್ತ್ವರತ್ನಮಾಲಾ 158 , 159 )
ಪಂಚಪರಣ = ಪ್ರಾಣ , ಅಪಾನ , ವ್ಯಾನ , ಉದಾನ , ಸಮಾನಗಳೆಂಬ ಐದುರೂಪವುಳ್ಳವ ;
ಚತುರಹಸ್ತ ಗದಾಪಾಣಿ = ಶ್ರೀವಾಯುದೇವರ ಧ್ಯಾನಶ್ಲೋಕದಲ್ಲಿನ ವರ್ಣನೆ -
ಉದ್ಯದ್ರವಿಪ್ರಕರಸನ್ನಿಭಮಚ್ಯುತಾಂಕೇಸ್ವಾಸೀನಮಸ್ಯನುತಿನಿತ್ಯವಚಃ ಪ್ರವೃತ್ತಮ್ ।
ಧ್ಯಾಯೇದ್ಗದಾಭಯಕರಂ ಸುಕೃತಾಂಜಲಿಂತಂ ಪ್ರಾಣ ಯಥೇಷ್ಟ ತನು ಮುನ್ನತ ಕರ್ಮಶಕ್ತಿಮ್ ॥
(4 - 69 ತಂತ್ರಸಾರ ಸಂಗ್ರಹ)
ಉದಯಿಸುತ್ತಿರುವ ಸೂರ್ಯರ ಸಮೂಹದಂತೆ ಪ್ರಕಾಶಿಸುತ್ತಿರುವ , ಶ್ರೀಹರಿಯ ತೊಡೆಯಲ್ಲಿ ಕುಳಿತುಕೊಂಡು , ಸದಾಕಾಲ ಅವನನ್ನೇ ಸ್ತುತಿ ಮಾಡುತ್ತಿರುವ , ಎರಡು ಕೈಗಳಿಂದ - ಒಂದರಲ್ಲಿ ಗದೆಯನ್ನೂ ಇನ್ನೊಂದರಲ್ಲಿ ಅಭಯಮುದ್ರೆಯನ್ನೂ ಧರಿಸಿ , ಇನ್ನೆರಡು ಕೈಜೋಡಿಸಿ ಶ್ರೀಹರಿಯನ್ನೇ ನಮಸ್ಕರಿಸುತ್ತಿರುವ ಇಚ್ಛಾರೂಪಿಯೂ , ಅತ್ಯದ್ಭುತ ಕಾರ್ಯ ಸಮರ್ಥನೂ ಆದ ಪ್ರಾಣದೇವನನ್ನು ಧ್ಯಾನಿಸಬೇಕು;
ಇನ = ಸೂರ್ಯ ;
ವನಜಾರಿಕುಲಾಧೀಶ = ಚಂದ್ರವಂಶಕ್ಕೆ ನಾಯಕನಾದ ಶ್ರೀಕೃಷ್ಣ ;
ಗುಪ್ತನಾಗಿ = ಯಾರ ಕಣ್ಣಿಗೂ ಕಾಣದ - ಎಲ್ಲರಲ್ಲೂ ಶ್ವಾಸಜಪ ಮಾಡುತ್ತಿರುವ;
ಮಟ್ಟತಾಳದ ನುಡಿ :
ನಿನ್ನ ಮಾಯ = ನಿನ್ನ ಇಚ್ಛೆ;
ನಿನ್ನೊಳಗೆ ಹರಿ = ' ಪುರಂದರವಿಠಲನು ಹನುಮನೊಳ್ವಾಸ '
ಚಿಣ್ಣಾವತಾರ = ವಾಮನಾವತಾರ ;
ರೂಪಕತಾಳದ ನುಡಿ :
ಸತ್ಕರ್ಮ ಮಾಡುವರ ಹಳಿದು = ವೇದಗಳನ್ನು ಪರಮ ಪ್ರಮಾಣವೆಂದು ನಂಬಿ , ವೇದ ವಿಹಿತ ಕರ್ಮಗಳನ್ನು ಶ್ರೀಹರಿ ಪ್ರೀತ್ಯರ್ಥವಾಗಿ ಮಾಡಿ , ಅವನಡಿಗರ್ಪಿಸುವ ಸುಜನರನ್ನು ದ್ವೇಷದಿಂದ ನಿಂದಿಸಿ ;
ಕುಲಮರ್ಯಾದೆಗಳ ಕೆಡಿಸಿ = ಅವಿಗೀತ ಶಿಷ್ಟಾಚಾರ ಪರಂಪರಾ ಪ್ರಾಪ್ತವಾದ ಆಚಾರ ವಿಚಾರಗಳನ್ನೂ , ಧ್ಯಾನ ಪ್ರವಚನ ರೂಪ ಉಪಾಸನೆಗಳನ್ನು ತಿರಸ್ಕರಿಸಿ ;
ಮನದೊಳು ನೆನೆದ = ಅನಿಲನೆ ನಿನ್ನ ಅಂದಿನ ವೈರಿ - (ಮಣಿಮಂತನು) ಭೀಮಾವತಾರದಲ್ಲಿ ನಿಮ್ಮಿಂದ ಸಂಹರಿಸಲ್ಪಟ್ಟ ವಿಷಯವನ್ನು ನೆನೆದು ;
ಝಂಪೆತಾಳದ ನುಡಿ :
ಚರಣಡಿ = ಕಾಲಡಿ ;
ವಿವಶಳಾಗಿ = ಯಾರೊಬ್ಬರಿಗೂ ಅಧೀನದಲ್ಲಿ ಇಲ್ಲದವಳಾಗಿ = ಸ್ವೇಚ್ಛೆಯಿಂದ ;
ಎರಡೆಂಬೊ = ಜೀವ - ಬ್ರಹ್ಮರು ಭೇದ ಉಳ್ಳವರೆಂಬ
ತ್ರಿವಿಡಿತಾಳದ ನುಡಿ :
ಪರಶುಕ್ಲತ್ರಯನೆ = ಸರ್ವೋತ್ತಮನಾದ ಶ್ರೀಹರಿಯಲ್ಲಿ ಸದಾಕಾಲದಲ್ಲಿ ಶುದ್ಧ ಬುದ್ಧಿಯುಳ್ಳ ಶ್ರೀಮಹಾಲಕ್ಷ್ಮೀ , ಬ್ರಹ್ಮವಾಯು , ಸರಸ್ವತೀ ಭಾರತಿ - ಈ ಮೂರು ವ್ಯಕ್ತಿಗಳ ಗುಂಪಿನವನಾಗಿ ;
ಬಲಿ ವರ್ದನನ = ಎತ್ತಿನ ;
ನಾರಿಯ ರಮಣ = ಭಾರತೀರಮಣ ;
ಮಧ್ವಾಖ್ಯನಾಮದಲ್ಲಿ = ಆನಂದತೀರ್ಥರೆಂಬ ಹೆಸರಿನಲ್ಲಿ ;
ಅನಿಮಿಷನದಿ = ದೇವನದಿಯಾದ ಗಂಗಾನದಿ ;
ಬಿನಗು = ಹೀನವಾದ ವ್ಯಕ್ತಿತ್ವವುಳ್ಳ ;
ದನುಜಾರಿ = ನಾರಾಯಣನ ಅವತಾರರಾದ ಶ್ರೀವೇದವ್ಯಾಸರು ;
ತೆರಳಿ = ಮಹಾಬದರಿಯಿಂದ ಉಡುಪಿಗೆ ತೆರಳಿ ;
ಅಟ್ಟತಾಳದ ನುಡಿ :
ನ್ಯಾವರಿಸಿ = ಹೊಂದಿಸಿ ನೆಲೆಗೊಳ್ಳುವಂತೆ ಮಾಡಿ ;
ಅವರಿಗೆ = (ಮೋಸದಿಂದ) ತನ್ನ ಅಧೀನರಾದ ಸುಜನರಿಗೆ ;
ವೆಕ್ಕಸ = ಕ್ರೂರ ;
ಭಂಗಿಸಿ = ತಿರಸ್ಕರಿಸಿ ;
ಝಷಕೇತುಪಿತ = ಮೀನಕೇತನನಾದ ಮನ್ಮಥನ ತಂದೆ , ಶ್ರೀಮನ್ನಾರಾಯಣ ;
ಬೆಸಸಿ = ತಿಳಿಸಿ ;
*ಶ್ರೀಮದಾಚಾರ್ಯರು 37 ದರುಶನ ಗ್ರಂಥಗಳನ್ನಲ್ಲದೆ , ಇನ್ನೂ ಅನೇಕ ಗ್ರಂಥಗಳನ್ನೂ ರಚಿಸಿರುವರೆಂಬುದನ್ನು ಶ್ರೀ ನಾರಾಯಣ ಪಂಡಿತಾಚಾರ್ಯರು ಸೂಚಿಸಿದ್ದಾರೆ -
ನಾನಾ ಸುಭಾಷಿತ ಸ್ತೋತ್ರ ಗಾಥಾದಿ ಕೃತಿ ಸತ್ಕೃತೀಃ ।
ತ್ವಯಿ ರತ್ನಾಕರೇ ರತ್ನ ಶ್ರೇಣಿರ್ವಾಗಣಯಂತಿ ಕೇ ॥
(ಸು.ವಿ . 15-84)
ಶತಗ್ರಂಥಕರ್ತಾ(ಪ್ರಮೇಯನವಮಾಲಿಕಾ ಶ್ಲೋಕ 29)
ಶಿಶುಜನರ = ಸಣ್ಣಶಿಶುಗಳಂತೆ ರಕ್ಷಣೆಗೆ ಅರ್ಹರಾದ ಸುಜನರನ್ನು ;
ಹಸಿದವನಂತೆ = ಜಗತ್ತನ್ನೇ ಸುಡಲು ಸಮರ್ಥವಾದ ತಮ್ಮ ಉದರಸ್ಥ ಜಠರಾಗ್ನಿಯಿಂದ ಯಾವ ಬಾಧೆ ಇಲ್ಲದವರಾಗಿದ್ದರೂ -
ವಿಷ್ಣುಮಂಗಲದಲ್ಲಿ ಭಿಕ್ಷಾವಸಾನ ಸಮಯದಲ್ಲಿ ಇನ್ನೂರಕ್ಕೂ ಹೆಚ್ಚು ಸಂಖ್ಯೆಯ ಬಾಳೇಹಣ್ಣುಗಳನ್ನೂ (ಸು.ವಿ. 5-32,33)
ಇಷುಪಾತದಲ್ಲಿ ' ರಾಜಕೇಲಿ ' ಎಂಬ ಜಾತಿಯ ಒಂದು ಸಾವಿರ ಬಾಳೇಹಣ್ಣುಗಳನ್ನೂ (ಸು.ವಿ. 10-51)
'ಗೋವೆ'ಯಲ್ಲಿ ಗರಿಷ್ಠ ಬಾಳೆಹಣ್ಣು - 4000 ಸಂಖ್ಯೆಯಲ್ಲಿ ಹಾಗೂ 30 ಕೊಡ ಪೂರ್ಣ ಹಾಲನ್ನೂ ಸ್ವೀಕರಿಸಿ (ಸು.ವಿ. 10-52)
ತಮ್ಮಲ್ಲಿನ ಮಹಾಮಹಿಮೆಯನ್ನು ಪ್ರಕಟಗೊಳಿಸಿದರು ;
ಆದಿತಾಳದ ನುಡಿ :
ಕುಲಿಶ = ವಜ್ರಾಯುಧ ;
ಸೋದರಮಾವನ ವೈರಿಯ = ಕಂಸನ ಶತ್ರುವಾದ ಶ್ರೀಕೃಷ್ಣನ ;
ನಾಲ್ಕೆರಡು ಸನ್ಯಾಸಿಗಳ - ಶ್ರೀಕೃಷ್ಣನ ಪೂಜೆಗೆ - ನಾಲ್ಕೆರಡು (4×2=8) - ಎಂಟು ಜನ ಸನ್ಯಾಸಿಗಳನ್ನು ;
ನರಸಿಂಹ-ಸುಬ್ರಹ್ಮಣ್ಯ ಪರಮಕ್ಷೇತ್ರದಲಿ ಇಬ್ಬರು ಯತಿಗಳ ಇಟ್ಟು = ಶ್ರೀವಿಷ್ಣುತೀರ್ಥರು ಶಿಷ್ಯರಾದ ಶ್ರೀವ್ಯಾಸತೀರ್ಥರೊಂದಿಗೆ ಉಡುಪಿಗೆ ಬರುವಾಗ್ಗೆ , ಶ್ರೀವ್ಯಾಸತೀರ್ಥರಿಂದ ಶ್ರೀಬಾದರಾಯಣತೀರ್ಥರಿಗೆ ಆಶ್ರಮ ಕೊಡಿಸಿ , ಅವರನ್ನು ಸುಬ್ರಹ್ಮಣ್ಯಮಠದಲ್ಲಿ ಪೂಜೆಗಾಗಿ ಇಟ್ಟು ;
ಕ್ಷೇತ್ರ ವಾಸರವೊಂದು ಬಿಡದೆ ಸಂಚರಿಸಿದ ಮಹಕಾಯ = ಎಂಟುಮಠದವರಿಗೆ ಎಂಟು ಮೂರುತಿ ಕೊಟ್ಟು/ಸರಸಿಜಾಸನ ಪೂಜೆ ಸಾಂಗವನೆ ಮಾಡಿದರು ಉಷಃಕಾಲದಲ್ಲಿ ಶ್ರೀಕೃಷ್ಣನ ಪೂಜೆ ಮಾಡಿ/ಸಾಯಂಕಾಲಕ್ಕೆ ಸುಬ್ರಹ್ಮಣ್ಯಕ್ಕೆ ಬಂದರು ॥ (50)
ಮಧ್ಯಾಹ್ನ ಕಾಲದಲ್ಲಿ ಮಧ್ವತಾಳ ಮಠಕ್ಕೆ ಬಂದ/ಮಧ್ವರಾಯರ ಕೀರ್ತಿ ಮೂರು ಜಗವ ತುಂಬಿತು ॥ (51)
( ಶ್ರೀವಾದಿರಾಜತೀರ್ಥಕೃತ - ಮಧ್ವಸುವ್ವಾಲಿ)
ಸರಸಿಜನಾಭಮುನಿ = ಶ್ರೀಪದ್ಮನಾಭತೀರ್ಥರು ;
ಕರದಂಡವನ್ನು ತಿರುಹಿ ನೆಲ್ಲು ಬೆಳೆವ = ದಂಡತೀರ್ಥವನ್ನು ಶ್ರೀಮದಾಚಾರ್ಯರು ನಿರ್ಮಾಣವನ್ನು ಮಾಡಿದ ವಿಚಾರ :
ಶ್ರೀಮದ್ವಾದಿರಾಜತೀರ್ಥರು ಮಧ್ವಸುವ್ವಾಲಿಯಲ್ಲಿ ಹೀಗೆ ಹೇಳಿದ್ದಾರೆ -
ಅಂದು ಆ ದೇಶದಲ್ಲಿ ಅನಾವೃಷ್ಟಿ ಆಗಿರಲು/ದಂಡಕೋಲು ತಿರುಗಿಸಿ ತೀರ್ಥವನೆ ಮಾಡಿದರು । ಸುತ್ತಮುತ್ತ ಭೂಮಿಯನ್ನು ಎತ್ತಿ ಕಾಲುವೆ ತೆಗೆಸಿ ಭತ್ತವನ್ನೆ ಬೆಳಸಿದರು ವಿಚಿತ್ರ ಮಹಿಮರು ॥ (55)
ನಮ್ಮ ಹಿರಿಯರು = ಶ್ರೀಪುರಂದರದಾಸರೇ ಮೊದಲಾದವರು ;
ವಿವರಣೆ :
ಹರಿದಾಸರತ್ನಂ ಶ್ರೀಗೋಪಾಲದಾಸರು
ಮುನಿಗಳ ಮಸ್ತಕ ರತುನ ಭಾರತಿರಮಣ...
ಶ್ರೀ ಸುಮಧ್ವವಿಜಯ ಸ್ತೋತ್ರ ಸುಳಾದಿ ,
ಶ್ರೀ ವಿಜಯದಾಸರ ರಚನೆ ,
ರಾಗ ಹಂಸಾನಂದಿ
for lyrics please click
******