Audio by Mrs. Nandini Sripad
ಧೇನಿಸೊ ಶ್ರೀಹರಿಯ ಮಹಿಮೆಯ ಪ
ಧೇನಿಸು ಲಯದ ವಿಸ್ತಾರ ಚತುರಾ
ನಾನಕಲ್ಪದ ವಿವರಾ ||ಆಹಾ||
ಧೇನಿಸು ಶತಾನಂದಗೆ ಶತ-
ಮಾನಕಾಲದಲ್ಲಿ ಇದ್ದು ನಡೆಸುವ ಹರಿಕಾರ್ಯ ಅ.ಪ
ಮೊದಲರ್ಧ ಶತಮಾನ ಸೂಕ್ಷ್ಮ ಸೃಷ್ಟಿ
ಪದುಮನ ತೋರಿದ ಮಹಾಮಹಿಮ ಆಗ
ಅದೆ ಪ್ರಥಮ ಪರಾರ್ಧವು ನೇಮ ಮೇಲೆ
ದ್ವಿತೀಯ ಭಾಗಕ್ಕೆಲ್ಲ ಬ್ರಹ್ಮ ||ಆಹಾ||
ಅದರೊಳು ತ್ರಿದಶ ಏಳರ್ಧ ವರ್ಷವು
ಪದುಮಜನಿಂದ ರಾಜ್ಯವನಾಳಿಸಿದ ಪರಿಯನು 1
ದ್ವಾದಶಾರ್ಧವರುಷ ತಾ ಉಳಿಯೆ ಆಗ
ತೋರ್ದ ಅದುಭೂತವಾದ ಮಹಾಪ್ರಳಯ ಸೂಚ-
ನಾದಿ ಕಾರ್ಯವು ತಾ ಮೆರೆಯೆ ಶತ
ಅಬ್ದ ಅನಾವೃಷ್ಟಿ ತೋರಿರೆ ಆಹಾ||
ಪದುಮಜಾಂಡದೊಳಿಹ ಪ್ರಜೆಗಳ ಸಂಹಾರ
ಉದಧಿ ಶೋಷಣೆಯಿಂದ ಸರ್ವಸಂಹಾರವು 2
ಮೇರುಪರ್ವತ ಸ್ಥಳದಲ್ಲಿ ಇದ್ದ ವಿ-
ಧಿರುದ್ರಾದಿಗಳೆಲ್ಲರಲ್ಲಿ ಮಹ
ನರಸಿಂಹ ಆನಂದದಿಂದಲಿ ಆನಂದ
ತೋರುತ್ತ ಕುಣಿದಾಡುತ್ತಲಿ ||ಆಹಾ||
ಹರುಷೋದ್ರೇಕದಿಂದ ಸಂಗಡ ಕುಣಿಯುವ
ಸುರರವಯವಗಳ ತಾನಲಂಕರಿಸಿದನ 3
ನರಹರಿ ನರ್ತನ ಮಾಡಿ ತನ್ನ
ಕರದಿ ತ್ರಿಶೂಲವನ್ನು ನೀಡಿ ದಿ-
ಕ್ಕರಿಗಳ ಪೋಣಿಸಿ ಆಡಿ ಸರ್ವರಉ-
ದರದೋಳಿಟ್ಟು ಕೂಡಿ ||ಆಹಾ||
ಪರಿಪರಿ ನಟಿಸುವ ನಿಟಿಲದೇವನ ಗ್ರಾಸ
ತ್ವರಿತದಿ ತಾ ಮಾಡಿ ಕ್ರೀಡಿಸುತಿರ್ಪನ್ನ 4
ವಾಯುದೇವರ ಗದಾಪ್ರಹಾರದಿಂದ
ಭಯ ಹುಂಕಾರದಿಂದ ಜೀವರ ಲಿಂಗ
ಕಾಯ ಭಂಗಗೈದವರಾ ಅವರ
ಆಯತ ಸ್ಥಳದಲ್ಲಿಟ್ಟವರಾ ||ಆಹಾ||
ಲಯಕಾಲದಿ ಸಂಕರುಷಣ ಮುಖದಿಂದ
ಲಯವಾಗಲು ಅಗ್ನಿ ಪೊರಟು ದಹಿಪುದಾ 5
ಕರಿಯ ಸೊಂಡಿಲಿನಂತೆ ಮಳೆಯ ಧಾರೆ
ನಿರುತ ಶತವರ್ಷಗರೆಯೆ ನೋಡೆ
ಸರ್ವತ್ರ ಜಲಮಯವಾಗೆ ಆಗ
ನೀರಜಾಂಡವೆಲ್ಲ ಕರಗೆ ||ಆಹಾ||
ಗರುಡ ಶೇಷ ಮಾರ್ಗವರಿತು ಬರುತಿರ್ಪ
ಸರ್ವಜೀವರ ತನ್ನ ಉದರದೊಳಿಟ್ಟನ್ನಾ 6
ಅರಿಯೋ ನೀ ಶೇಷಮಾರ್ಗವನ್ನೂ ಇಲ್ಲಿ
ಸುರರು ಕುಬೇರನೊಳಿನ್ನು ಆತ
ವರುಣನಲ್ಲಿ ಲಯವನ್ನೂ ಚಂದ್ರ
ಹರಿಪಾರ್ಷಧರನಿರುದ್ಧನನ್ನು ಆಹಾ
ಅನಿರುದ್ಧ ಸನತ್ಕುಮಾರನ್ನ ತಾವು ಪೊಂದಿ
ಮಾರ ವಾರುಣಿಯು ಹರಿಮಡದಿಯರಲ್ಲಿ ಲಯವಾ 7
ಖಗಪನೊಳವಶಿಷ್ಟ ಸುರರು ಮೊದಲು
ಅಗ್ನಿಯೊಳ್ ಲಯವನ್ನೈದುವರು ಆ
ಅಗ್ನಿ ತಾ ಸೂರ್ಯನ್ನ ಸೇರುವನು ಸೂರ್ಯ
ತಾ ಗುರುವನ್ನ ಸೇರುವನು ||ಆಹಾ||
ಆಗಲೇ ಸರ್ವಮನುಜರು ಪಿತೃಗಳು
ನಿರುಋತಿಯೊಳು ಪೊಕ್ಕು ತಾ ಯಮನಲ್ಲಿ ಸೇರುವಾ 8
ಯಮ ಪ್ರಿಯವ್ರತರಾಯರೆಲ್ಲ ಲಯ
ತಮ್ಮ ಸ್ವಾಯಂಭು ಮನುವಿನಲ್ಲಿ ಮತ್ತೆ ಮ-
ಹಿಮ ಭೃಗುವು ದಕ್ಷನಲ್ಲಿ ಲಯವು
ಆ ಮಹಾದಕ್ಷ ಸ್ವಾಯಂಭು ಇಂದ್ರನಲ್ಲೀ-ಆಹಾ
ಅಮರಪತಿಯು ತಾ ಸೌಪರಣಿಯನು ಪೊಂದಿ
ಈ ಮಾರ್ಗದಿ ತಾನು ಗರುಡನ್ನ ಸೇರುವುದು 9
ಶೇಷಗರುಡರೊಡಗೂಡಿ ಆಗ
ಸರಸ್ವತಿಯನ್ನೆ ಪೊಂದುವರು ಮತ್ತೆ
ಆಸುವಿರಂಚಿ ವಾಯುಗಳು ತಾವು
ಸರಸ್ವತಿಯನ್ನೆ ಪೊಂದುವರು ಆಹಾ
ಈ ಸರಸ್ವತಿ ಕಾಲಬ್ರಹ್ಮನ್ನ ಸೇರುವ
ಈ ಸೂಕ್ಷ್ಮಲಯವನ್ನೆ ಕ್ರಮವರಿತು ನೀನೀಗ 10
ಸೂತ್ರನಾಮಕ ವಾಯುದೇವ ರುದ್ರ
ಉಮೆಪ್ರದ್ಯುಮ್ನದ್ವಾರ ತ್ರಾತ
ಸಂಕುರುಷಣನಾ ದಯದಿ ಜಗ-
ನ್ಮಾತೆ ಲಕ್ಷ್ಮಿಯೊಳು ಸೇರುವರು ||ಆಹಾ||
ಚತುರಾಸ್ಯ ಜೀವರ ತನ್ನುದರದೊಳಿಟ್ಟು
ಅತಿಮೋದದಿಂದ ವಿರಾಟನ್ನೈದುವುದು11
ವಿರಾಟ್ ಬ್ರಹ್ಮನು ತಾನೆಲ್ಲಾ ತನ್ನ ಆ
ವರಣದಲ್ಲಿ ಇಪ್ಪಂಥ ತನ್ನ
ಧರೆಯಲ್ಲಿ ಲೀನವಾಗುವ ಆಗ
ಪರಿಪರಿಯಿಂದ ತನ್ಮಾತÀ್ರ ಆಹಾ
ಅರಿತು ಶಬ್ದಸ್ಪರ್ಶರೂಪರಸಗಂಧ
ಪರಿಪರಿಯಿಂದಲಿ ಲಯವನ್ನೈದುವುದಾ12
ಗಂಧದ್ವಾರ ಲಯತನ್ನ ಬಿಲದಿ ಜಾತ
ವೇದದಲ್ಲಿ ರಸ ಲಯವು ರೂಪ
ದದ್ವಾರ ಲಯ ವಾಯುವಿನೊಳು ಸ್ಪರ್ಶದ
ದ್ವಾರ ಲಯ ಆಕಾಶದೊಳು-ಆಹಾ-
ಶಬ್ದದ್ವಾರ ಲಯತಮ ಅಹಂಕಾರಾದಿ
ತದಾಂತರ್ಗತÀ ಭಗವದ್ರೂಪದಲ್ಲ್ಯೆಕ್ಯವಾ 13
ಅಹಂಕಾರತ್ರಯದಲಿ ಬಂದಾ ತತ್ತ ್ವ
ದೇಹಸೂರರೆಲ್ಲರ ಲಯವು ಇಹ
ತತ್ವಾಂತರ್ಗತ ಭಗವದ್ರೂಪಕೆ ||ಆಗ||
ಅಲ್ಲಲ್ಲಿ ತನ್ನೊಳೈಕ್ಯವೂ-ಆಹಾ
ಅಹಂಕಾರತ್ರಯ ಮಹತ್ತತ್ವದಲ್ಲಿ ಲಯ
ಮಹತ್ತತ್ತ ್ವವು ಮೂಲಪ್ರಕೃತಿಯಲ್ಲಿ ಲಯವು 14
ವಾಸುದೇವಾದಿ ಚತುರ ರೂಪ ಮತ್ಸ್ಯ
ಕೇಶವ ವಿಶ್ವಾದಿ ರೂಪ ಅಜಿತ
ಶ್ರೀಶನನಂತಾದಿರೂಪ ಮತ್ತು
ಶ್ರೀಶನಷ್ಟೋತ್ತರ ರೂಪ ||ಆಹಾ||
ತಾ ಸಕಲರೂಪಗಳು ಮೂಲರೂಪದೊಳೈಕ್ಯ
ಶಾಶ್ವತನಾದ ಶ್ರೀ ಸಚ್ಚಿದಾನಂದನ್ನಾ 15
ಗುಣಮಾನಿ ಶ್ರೀ ಭೂ ದುರ್ಗಾ ಅಂ-
ಭ್ರಣಿ ರೂಪವನ್ನೆ ತಾ ಧರಿಸೀ ಸಂ-
ಪೂರ್ಣನ್ನ ಸಾಮೀಪ್ಯ ಸೇರಿ ಪೂರ್ಣ
ಕಾಮನ್ನ ಎಡಬಿಡದೆ ನೋಡೀ ||ಆಹಾ||
ಕ್ಷಣ ಬಿಡದೊಡೆಯನ ಅಗಣಿತಗುಣಗಳ
ಕಡೆಗಾಣದೆ ನೋಳ್ಪ ನಿತ್ಯಮುಕ್ತಳ ಸಹಿತಾ16
ಏಕೋ ನಾರಾಯಣ ಆಸೀತ ಅ-
ನೇಕ ಜನರ ಸಲಹಲಿನ್ನು ತಾನೆ
ಸಾಕಾರದಲಿ ನಿಂದಿಹನು ಇಂತು
ವೇಂಕಟಾಚಲದಿ ಇನ್ನು ಮುನ್ನು ||ಆಹಾ||
ಏಕಮನಸಿನಿಂದ ಭಜಿಪ ಭಕ್ತರನ ತಾ ನಿ-
ರಾಕರಿಸದೆ ಕಾಯ್ವ ಶ್ರೀ ವೇಂಕಟೇಶಾ ನಿತ್ಯ 17
****