ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಾರ್ಥನಾ ಸುಳಾದಿ
ರಾಗ ಕಾಂಬೋಧಿ
ಧ್ರುವತಾಳ
ಹರಿಯೇ ಸರ್ವೋತ್ತಮ ಹರಿಯೆ ಪರದೈವ
ಪರಿಪೂರ್ಣ ಗುಣಭರಿತ ನಿರಾಶ್ರಯಾನಂತ
ಪರತತ್ವ ಪರಪೂಜ್ಯ ಪರಮ ಮಂಗಳಮೂರ್ತಿ
ಸಿರಿದೇವಿ ಪರಮೇಷ್ಟಿ ಹರರಿಂದ ವಂದಿತ
ಸ್ವರಮಣ ಶ್ರುತಿಪಾದ್ಯ ಜರಾಮರಣ ರಹಿತ
ಸುರರ ಪಾಲಕನೆ ನಿರ್ದೋಷಿ ಶಿಖಾಮಣಿ
ಕರಿರಾಜ ವರದನೆ ಕರುಣಾಕರ ದೇವ
ದುರುಳ ಮರ್ದನ ದೂರಾತಿ ದೂರನೆ
ಸುರಪತಿ ಸುರಮುನಿಗಳಿಂದ ಸೇವಿತ
ಗರುಡವಾಹನ ಚಲುವ ಸ್ಥಿರ ಭಕುತರೊಡಿಯ
ಸಿರಿ ದ್ರೌಪದಿ ಅಭಿಮಾನ ರಕ್ಷಕ ದೇವ
ಸ್ಮರಣೆ ಮಾತ್ರದಲ್ಲಿ ಅಜಮಿಳನ ರಕ್ಷಿಸಿದಂತೆ
ಪರಮ ದಯಾಳು ಗೋಪಾಲವಿಟ್ಠಲರೇಯ
ಸರಿ ಇಲ್ಲದ ದೈವ ಮೊರೆ ಹೊಕ್ಕೆ ಕಾಯೋ ॥ 1 ॥
ಮಟ್ಟತಾಳ
ಅನಂತ ಜನ್ಮದಿ ಅನಂತ ಪಾಪವ ಮಾಡಿ
ನಿನ್ನನು ಮರೆತೇನೊ ಸನ್ಮುನಿಗಳ ಪ್ರೀಯಾ
ಎನ್ನಂಥ ಪಾತಕಿಯ ಏನೆಂತು ಕರುಣಿಸಿಯೋ
ಬಿನ್ನಹಕ್ಕೆ ಬಾಯಿಲ್ಲ ನಿನ್ನ ಬೇಡಲೆನಗೆ
ಬೆನ್ನು ಬಿದ್ದವರನ್ನು ಮನ್ನಿಸಿ ಕಾಯೋವಂಥ
ಘನ್ನ ಬಿರಿದುಂಟಿಂದಿನ್ನು ನಾ ಮೊರೆ ಹೊಕ್ಕೆ
ಚಿನ್ನುಮಯ ಮೂರುತಿ ಗೋಪಾಲವಿಟ್ಠಲರೇಯಾ
ಅನ್ಯರಿಗೊಪ್ಪಿಸದೆ ನಿನ್ನವರೊಳಿರಿಸೋ ॥ 2 ॥
ತ್ರಿವಿಡಿತಾಳ
ಹಿಂದೆ ನಾ ಮಾಡಿದಂಥ ಕುಂದು ದೋಷಗಳಿಂದ
ಬಂದೆ ನಾ ನರಜನ್ಮ ಬಂಧನದೊಳಗಿನ್ನು
ಮುಂದಣ ಸಾಧನಗಳೊಂದು ನಾ ಕಾಣೆನಯ್ಯಾ
ಎಂದಿಗೆ ನಿನ್ನ ಅರವಿಂದ ಚರಣ ಬಳಿಗೆ
ಪೊಂದಿಸಿದೆಯೊ ಎನ್ನನು ಕಂದರ್ಪಜನಕನೇ
ನಿಂದಿರಿಸಿನ್ನು ನಿನ್ನ ಚಂದದ ರೂಪವ ಆ -
ನಂದಾದಿ ಎನ್ನ ಮನ ಮಂದಿರದೊಳಗೆ
ಬಂಧನಾಗಲಿ ಸುಖ ಬಂದದಾಗಲಿ ಜನ
ನಿಂದೆ ಮಾಡಲಿ ಬಹು ವಂದಿಸುವರಾಗಲಿ
ಒಂದೇ ಮನವು ಧೃಡದಿಂದ ನಿನ್ನರ್ಚಿಪಂತೆ
ಛಿಂದೆ ಇಲ್ಲದ ಭಕ್ತಿ ಚಂದದಿ ಪಾಲಿಸಯ್ಯಾ
ಮಂದರಧರನೇ ಗೋಪಾಲವಿಟ್ಠಲರೇಯಾ
ವಂದಿಸಿದೆನು ಮನ ಬಂದದ್ದು ಮಾಡೋ ॥ 3 ॥
ಅಟ್ಟತಾಳ
ಪದ್ಧತಿ ತಿಳಿಸಿನ್ನು ಮಧ್ವ ಮತಾನುಸಾರ
ಶುದ್ಧ ಜ್ಞಾನವ ಕೊಟ್ಟಪದ್ಧ ಮತಗಳೆನಿ -
ಷಿದ್ಧವೆನಿಸಿ ಪೊದ್ದಿಸದಂತಘ ವದ್ದು ಕಡೆಗೆ ನೂಕಿ
ತಿದ್ದಿಸಿ ಎನ್ನನು ಉದ್ಧರಿಸು ಪಾಪ
ಖದ್ದಿ ನೊಳ್ಹಾಕದೆ ಮುದ್ರೆ ಪಚ್ಚಿಸಿ ನಿನ್ನ ಉದ್ಯೋಗ ದೊಳಗಿಡು
ಪ್ರದ್ಯುಮ್ನ ಮೂರುತಿ ಗೋಪಾಲವಿಟ್ಠಲರೇಯಾ
ಬಿದ್ದೆ ಚರಣದ ಮೇಲೆ ಬದ್ಧಾಗಿ ಪಿಡಿಯೋ ॥ 4 ॥
ಆದಿತಾಳ
ಆರೋಗ್ಯ ಆಯುಷ್ಯ ಐಶ್ವರ್ಯಗಳು ಮಾನ ಅಪೇಕ್ಷ
ಕೋರದಂತೆ ಮಾಡಯ್ಯಾ ಅನಾಥಬಂಧು
ಘೋರಿಸುತಿಪ್ಪ ಎನ್ನ ಆರು ಮಂದಿ ಖಳರ
ದೂರಮಾಡಿ ಇನ್ನು
ತೋರಿಸು ನಿನ್ನ ಚರಣ ಸೇರಿಸು ನಿನ್ನ ಪರಿ -
ಚಾರಕರೊಳಗಿನ್ನು ಅರೆ ಸಂಸಾರದ ಮರಿಯ ಕೆಳಗೆ
ಶ್ರೀರಮಣನೆ ಚಲ್ವ ಗೋಪಾಲವಿಟ್ಠಲಾ -
ಪಾರ ಗುಣನಿಧಿ ಸಾರಿದೆ ಕಾಯೋ ॥ 5 ॥
ಜತೆ
ಎಂದಿಗೆ ನಿನ್ನ ಪಾದ ಚಂದಾದಿ ಪೂಜಿಸಲಿ
ಕುಂದು ಇಲ್ಲದ ಭಕ್ತಿಲಿ ಬೇಗ ಗೋಪಾಲವಿಟ್ಠಲ ॥
******