Audio by Mrs. Nandini Sripad
ಶ್ರೀ ವ್ಯಾಸರಾಜ ವಿರಚಿತ ದೃಢಭಕ್ತಿ ಸುಳಾದಿ
ರಾಗ ಸಾವೇರಿ
ಧ್ರುವತಾಳ
ತಾಯಿ ಎಂಬೆನೆ ನಿನ್ನ , ಧ್ರುವನ
ತಾಯಿ ನಿನ್ನಂತೆ ಕಾಯ್ದಳೆ
ತಂದೆ ಎಂಬೆನೆ ನಿನ್ನ , ಪ್ರಹ್ಲಾದನ
ತಂದೆ ನಿನ್ನಂತೆ ಕಾಯ್ದನೆ
ಭ್ರಾತೃ ಎಂಬೆನೆ ನಿನ್ನ , ವಿಭೀಷಣನ
ಭ್ರಾತೃ ನಿನ್ನಂತೆ ಕಾಯ್ದನೆ
ಭರ್ತೃ ಎಂಬೆನೆ ನಿನ್ನ , ಪಾಂಚಾಲಿಯ
ಭರ್ತರು ನಿನ್ನಂತೆ ಕಾಯ್ದರೆ
ಪುತ್ರನೆಂಬೆನೆ ನಿನ್ನ , ಉಗ್ರಸೇನನ
ಪುತ್ರ ನಿನ್ನಂತೆ ಕಾಯ್ದನೆ
ಮಿತ್ರನೆಂಬೆನೆ ನಿನ್ನ , ಗಜೇಂದ್ರನ
ಮಿತ್ರರು ನಿನ್ನಂತೆ ಕಾದರೆ
ಆವ ಅನಿಮಿತ್ತ ಬಂಧುವೊ ಮೇ -
ಣಾವ ನೀನಾವ ಕರುಣಾಸಿಂಧುವೋ
ಸಿರಿಪತಿ ಸಿರಿಕೃಷ್ಣ ನಿನ್ನ ಭಕುತರಲಿ
ನೆಂಟತನ ಹೊಸಪರಿಯಾಯಿತಯ್ಯಾ ॥ 1 ॥
ಮಠ್ಯತಾಳ
ದಾನಿಗಳರಸಂಗೆ ದೈನ್ಯ ಬಲಿ
ಲಕ್ಷುಮಿಪತಿಗೈದೆ ಯಜ್ಞ ಭಿಕ್ಷತೆ ತಿರುಪೆ
ಕೈವಲ್ಯಪತಿಗೆ ದಾವಿನ ಬಂಧನ
ಲೋಕ ಗುರುವಿಂಗೆ ಪೊಕ್ಕಾಟವೆ ಗೋಪೆರಲ್ಲಿ
ಈಸು ವಿನೋದವು ನಿನ್ನ ಭಕುತರಿಗಾಗಿಯೇ
ಶ್ರೀಪತಿ ಸಿರಿಕೃಷ್ಣ ನಿನ್ನ ದಾಸರಿಗಾಗಿಯೇ ॥ 2 ॥
ರೂಪಕತಾಳ
ಹಿಂದೆ ಪೊಂಗೊಳಲೂದೊಂದೊಂದು
ಧಂದಾ ಗೋಪಾಲ ಮೂರುತಿಯೆ ಎಂದು
ಒಂದು ಬಾರೆ ನೆನೆದ ಕುಬುಜಿಗೆ ಮುಕುತಿಯ -
ನಿತ್ತಂದಡೆ ನಾ ನಿನ್ನ ನೆನವುದ ಬಿಡೆ
ಶ್ರೀ ಕೃಷ್ಣ ಎಂದೆಂದಿಗೂ ಬಿಡೆ ॥ 3 ॥
ಝಂಪೆತಾಳ
ಆಳು ನಾ ನಿನ್ನಾಳು ನಿನ್ನಾಳು ನಾನು
ನೀನು ತಂದೆ ನಿನ್ನ ಕಂದ ನಾನು
ಶರಣ್ಯ ನಾ ನಿನ್ನ ಶರಣಾಗತ ನಾನು
ಓವ ನೋವಿತ್ತಿಂತು ಕಾವರ್ಯಾರಿನ್ನು
ಶ್ರೀಪತಿ ಸಿರಿಕೃಷ್ಣ ನೀ ಎನ್ನ ಸಲಹಬಹುದೊ ॥ 4 ॥
ತ್ರಿಪುಟತಾಳ
ಕಂಸಾರಿ ಎಂದು ಸಂಸಾರ ದಾಟುವೆನೊ
ಸಿರಿಪತಿ ಎಂದು ಪಾಪಂಗಳಟ್ಟುವೆನೊ
ಕಂಜನಾಭ ಎಂದಂಜಿಸುವೆ ಜವನವರ
ಸಿರಿಪತಿ ಸಿರಿಕೃಷ್ಣ ನಿನ್ನ ದಾಸರ ದಾಸ ನಾನು ॥ 5 ॥
ಅಟ್ಟತಾಳ
ಹಿಂದೆ ಅಸುರರ ಬಲಿದೆ ಬಳಲಿಸಿದೆ
ವೃಂದಾರಕರಿಂಗೆಲ್ಲ ನೀ ಸುಧಿಯನೆರದೆ
ಆವಾವ ಪರಿಯಲ್ಲಿ ಅಸುರರ ಬಳಲಿಸಿದೆ
ದೇವರೆಲ್ಲರ ನೋವೆ ಕಾಯ್ದೆ
ಆಗಮೋಕ್ತದ ದೇವಂಗಳಿಗೆಲ್ಲ ನೀನೊಬ್ಬನೆ
ತೆತ್ತಿಗನಲ್ಲವೆ ಶ್ರೀಕೃಷ್ಣ ಆವಾಗ ॥ 6 ॥
ಏಕತಾಳ
ಆವಾ ಕಾಲದಲಿ ಆವ ದೇಶದಲಿ
ಶ್ರೀಕೃಷ್ಣ ಕಾವಂತೆ
ಬಂಧು ಜನ ಕಾಯ ಬಲ್ಲುದೆ
ಸಿರಿಪತಿ ಸಿರಿಕೃಷ್ಣ ಆವಾವ ಕಾಲದಲಿ ॥ 7 ॥
ಜತೆ
ಅನಿಮಿತ್ತ ಬಂಧು ಈ ನಮ್ಮ ಶ್ರೀಕೃಷ್ಣ
ಎಂದೆಂದಿಗೂ ಶತ್ರು ಅಸುರರಿಗೆ ॥
**********