Audio by Mrs. Nandini Sripad
ಶ್ರೀವಿಜಯದಾಸಾರ್ಯ ವಿರಚಿತ ಶ್ರೀಕೃಷ್ಣ ನಿಂದಾಸ್ತುತಿ ಸುಳಾದಿ
ರಾಗ ಸಾರಂಗ
ಧ್ರುವತಾಳ
ಅಂಜಿಸುವದೇನೋ ಪರಂಜಳವಾಗಿರದೇ
ಕೆಂಜಡಿಯನೊಡಿಯಾ ಯಾದವರೊಡಿಯಾ
ಎಂಜಲ ಉಂಡು ಗುಲಗಂಜಿಯ ದಂಡಿಯ ಧರಿಸಿ
ಗಂಜಿಗೂಳನ್ನು ಕುಡಿದದ್ದು ಮರದಿಯಾ
ಭುಂಜಿಸಿ ಪರವು ಮಾಡಿ ತಂದ ವಾಗರಕೆ ನೀ
ಅಂಜದೆ ಏಳು ದಿವಸ ಗಿರಿಯ ಪೊತ್ತೇ
ಕಿಂಚನ ನಿನ್ನದು ನಿನಗಂಜಲ್ಯಾಕೇ ಧ -
ನಂಜಯ ನಾಮಾ ಹರಿ ವಿಜಯವಿಟ್ಠಲ ಗೊಲ್ಲ ॥ 1 ॥
ಮಟ್ಟತಾಳ
ಬಾಲಕತನದಲ್ಲಿ ಪಾಲು ಮೊಸರು ಕದ್ದು
ಕೋಲು ಬಡಿಗೆಯಿಂದ ಕೊಲಿಯ ಕೊಲ್ಲಿಸಿಕೊಂಡೆ
ಕಾಲನು ವರಳಿಗೆ ಬೀಳು ಕಟ್ಟಿಸಿಕೊಂಡು
ಏಳಲವಾದಿಯೊ ಗೊಲ್ಲ ಬಾಲೇರಿಗೆ ಎಲ್ಲ
ಮೂಲೋಕವು ಬಿಡದೆ ಆಳುವ ಧೊರೆತನವು
ಏಳಲವಾಯಿತೊ ವಿಜಯವಿಟ್ಠಲ ಶ್ರೇಷ್ಠಾ ॥ 2 ॥
ರೂಪಕತಾಳ
ರಕ್ಕಸಗಂಜಿ ಮುಚುಕುಂದನ ಮೊರೆ ಬಿದ್ದೆ
ರಕ್ಕಸಗಂಜಿ ಸಾಗರದೊಳು ಪುರ ಬಿಗಿದೆ
ರಕ್ಕಸಗಾಗಿ ವಿಕಾರ ಮೊಗನಾದಿ
ರಕ್ಕಸಗಾಗಿ ಕೋಡಗ ಬಲ ನೆರಹಿದೆ
ರಕ್ಕಸಾಂತಕ ನಿನ್ನ ಮಕ್ಕಳಾಟಕೆ ದೇ -
ವಕ್ಕಳ ಮನಸ್ಸಿಗೆ ಸಿಕ್ಕಿದೆಂತೆಂಬೋರು
ಮಕ್ಕಳ ಬೇಡಿ ನೀ ಮುಕ್ಕಣ್ಣನೊಲಿಸಿದೆ
ಠಕ್ಕು ಮಾಯಾತನ ಕಕ್ಕುಜ ಗೊಂಬೆನೊ
ಚಿಕ್ಕವನ ಹಿರಿಯನ ಮಾಡಿ ಪುಣ್ಯವ
ದಕ್ಕಿಸಿಕೊಂಡ ಶ್ರೀವಿಜಯವಿಟ್ಠಲ ಪುಂಡ ॥ 3 ॥
ಝಂಪಿತಾಳ
ಅಳಕುವವಗೆ ಕಾವಳದೊಳು ಹುಲ್ಲ ಸರವೇ
ತುಳಿದರೆ ಪೊಳೆವೊದು ಫಣಿ ವೋಲು
ಅಳುಕದವಗೆ ಜಲಧಿ ಮೊಳಕಾಲು ಉದಕವೋ
ಅಳುಕುವದೇನು ನಿನ್ನಯ ಭೀತಿಗೆ
ಇಳಿಯ ಮುಣಗಿದವಗೆ ಛಳಿಯ ಪರವೇನು ಸಿ -
ಡಲಿ ಗಂಜದವನು ಹೆಗ್ಗೋಳಿಗಂಜುವನೆ
ಬಲವಾಗಿ ಎನ್ನೆಡಬಲದಲಿ ನಿನ್ನ ನಾಮಗಳು
ಪಾಲಿಸುತಿರೆ ಚಲಿಸಲ್ಯಾತಕೋ ದೇವಾ
ಕುಲಿಶ ಪಾಪದ ಗಿರಿಗೆ ವಿಜಯವಿಟ್ಠಲ ಕೃಷ್ಣ
ಕಲಕಾಲದಂತೆ ನೋಡದ ಹೊಸ ಪರಿ ಏನೋ ॥ 4 ॥
ತ್ರಿವಿಡಿತಾಳ
ಬಾಗಿಲ ಕಾಯಿಸಿದ ಹಾಗಾ ಕೊಡದೆ ಬಲಿ
ಯೋಗಿ ನಾರದನು ಸ್ತ್ರೀಯರ ಬೇಡಿದ
ಭಾಗೀರಥಿ ಸುತನು ನಿನ್ನ ಪಂಥವ ಕಳೆದ
ಜೋಗಿಯಾಗಿ ಪಾರ್ಥ ಅನುಜೆಯ ವೈದ
ಭೋಗೀಶನು ಬಿಡದೆ ಹೆಣಗಾಡಿದನಯ್ಯಾ
ನಾಗರಾಜನು ನಿನ್ನ ಕೂಗಿ ಕಂಗೆಡಿಸಿದ
ಹೀಗಿದ್ದವರ ಬೆರಳ ಬಾಗಿಸಿದಿ ಏನೋ ನೀ -
ನೇ ಗತಿ ಎಂದೆನಲಾಗಿ ಎನ್ನ ನೀನಂಜಿಸಿಕೊಂಬೆ
ಯೋಗಿಯಾಗಿ ಎನ್ನ ನೀನಂಜಿಸುವದೇನೋ
ಪೂಗಾರಗೊಲಿದ ಭಂಡುಗಾರ ಗೋವಾ ಶ್ರುತಿ
ಸಾಗರ ನಾಮ ವಿಜಯವಿಟ್ಠಲರೇಯಾ ॥ 5 ॥
ಅಟ್ಟತಾಳ
ಸೂತ ಸತಿಯ ಉದರದಲ್ಲಿ ಬಂದವನಿಗೆ
ಖ್ಯಾತಿ ಯಾತಕೊ ಇಷ್ಟು ಭೂತಳದೊಳಗೆ
ದೂತನಾಗಿ ಪೋಗಿ ಹಸ್ತಿನಾಪುರದಲ್ಲಿ
ಭೂತಿಗಳಿಂದ ಬಿಗಿಸಿಕೊಂಡು ನಿಂದು
ಯಾತಕೆ ನಿನಗಿಷ್ಟು ಬಿಂಕದ ಮಾತು
ಭೀತಿಗೊಂಬವರಿಗೆ ತೃಣ ಮೇರುವಾದಂತೆ
ಕೋತಿ ಕೊರವಂಗೆ ಸಿಕ್ಕಿದಂತೆ ಎನ್ನ
ಈ ತೆರದಲಿ ಇನ್ನು ಕಾತುರೆಬ್ಬಿಸವರೇ
ಜಾತಿಯಿಲ್ಲದ ನಿತ್ಯ ಜಾತರಹಿತ ಮಹ -
ಭೂತ ವಿಜಯವಿಟ್ಠಲ ನೀತವೇ ನಿನಗೆ ॥ 6 ॥
ಆದಿತಾಳ
ಒದ್ದವನೆ ಒದ್ದೇ ಪೋದಾ ಮೆದ್ದವನೆ ಮೆದ್ದೇ ಪೋದಾ
ಕದ್ದವನೆ ಕದ್ದೇ ಪೋದಾ, ಗೆದ್ದವನು ಗೆದ್ದೇ ಪೋದಾ
ಇದ್ದವನೆ ಇದ್ದೇ ಪೋದಾ, ಎದ್ದವನು ಎದ್ದೇ ಪೋದಾ
ಗದ್ದುಗೆ ನೀಡಿಸಿದವ ಹೊದ್ದಿದ ನಿನ್ನವರೊಳು
ಸಿದ್ದಿದ ವಿಜಯವಿಟ್ಠಲ ಬಿದ್ದೆನೋ ನಿನ್ನ ಪಾದಕ್ಕೆ
ಪದ್ದು ಎನ್ನ ಕೂಡ ನಿಷಿದ್ದ ಎಂದೆಂದಿಗೂ ಬೇಡ ॥ 7 ॥
ಜತೆ
ಕಂಡವರಿಗೆ ಮುನ್ನೆ ಪ್ರಾಯಶ್ಚಿತ್ತವೇ ಇಲ್ಲ
ಕುಂಡಲಿ ಶಯನ ಶ್ರೀವಿಜಯವಿಟ್ಠಲ ನಿನಗಂಜೆನೋ ॥
***