..
kruti by shantibai dasaru ಶಾಂತಿಬಾಯಿ ದಾಸರು
ದೇವಾ ನಿನ್ನಯ ಪಾದ ಸೇವೆಯೊಳಿರುವಂತೆ
ಕಾವುದೆನ್ನಯ ಮನ ಪಾವನ ಮೂರುತಿ ಹರಿಯೇ ಪ
ಒಲವಿನ ಸಂಸಾರ ಸ್ಥಿರವೆಂದು ನಂಬುತ್ತ
ಬರಿದೆ ಪೋಗದೆ ನಿಜದರಿಪಿನೋಳ್ ನಿಲಿಸೆನ್ನಾ ಹರಿಯೇ 1
ಎಂದು ಕುಂದದ ನಿತ್ಯಾನಂದವಾಗಿಹ ನಿಜ
ಛಂದದೊಳಿರುವತ್ಯಾನಂದದೊಳ್ ನಿಲಿಸೆನ್ನಾ ಹರಿಯೇ 2
ಶರಣರಕ್ಷಕ ನಿನ್ನ ಕರುಣವೆನ್ನಯ ಮೇಲೆ
ಮರೆಯವೆ ಇರುವಂತೆ ಎರಕವಾಗಿಸೆನ್ನಾ ಹರಿಯೇ 3
ಆ ಸ್ವಪ್ರಕಾಶದಿ ಸೂಸದೆ ನಿಲುವಂತೆ
ಭಾಸುರ ಘನಸುಖವಾಸದೊಳ್ ನಿಲಿಸೆನ್ನಾ ಹರಿಯೇ 4
ಭಾವಭಾವನೆಯಲ್ಲಿ ತೀವಿ ನಾರಾಯಣಾ
ಪಾವನ ಗುರುಮೂರ್ತಿ ಸೇವೆ ಶಾಂತಿಯನೀಯೋ ಹರಿಯೇ 5
***