Showing posts with label ದುರಿತ ಕದಳಿ ವನ abhinava pranesha vittala ankita suladi ವರದೇಂದ್ರ ಸ್ತೋತ್ರ ಸುಳಾದಿ DURITAKADALI VANA VARADENDRA STOTRA SULADI. Show all posts
Showing posts with label ದುರಿತ ಕದಳಿ ವನ abhinava pranesha vittala ankita suladi ವರದೇಂದ್ರ ಸ್ತೋತ್ರ ಸುಳಾದಿ DURITAKADALI VANA VARADENDRA STOTRA SULADI. Show all posts

Monday, 9 December 2019

ದುರಿತ ಕದಳಿ ವನ abhinava pranesha vittala ankita suladi ವರದೇಂದ್ರ ಸ್ತೋತ್ರ ಸುಳಾದಿ DURITAKADALI VANA VARADENDRA STOTRA SULADI

Audio by Mrs. Nandini Sripad

ಶ್ರೀ ಅಭಿನವ ಪ್ರಾಣೇಶವಿಠಲದಾಸಾರ್ಯ ವಿರಚಿತ 

 ಶ್ರೀ ವರದೇಂದ್ರರ ಸುಳಾದಿ 

 ರಾಗ ಮೋಹನ 

 ಧ್ರುವತಾಳ 

ದುರಿತಕದಳಿ ವನದ್ವಿರದಿ ಮಂತಿಪ್ಪನು
ಪರಮತ ಶರಧಿಗೆ ಕರಿರಾಜನೆನಿಸುವ
ಮರುತ ಮತಾಂಬುಧಿ ಪರಿಪೂರ್ಣ ಹಿಮಕರ
ಧರಣಿದೇವರ ಸೇವೆ ಹರುಷದಿ ಕೊಳ್ಳುತವರು -
ದ್ಧರಿಸುವ ಕರುಣಾಳು ಗುರುರಾಜ ಪವಿತೇಜ
ಸುರರಾಜನಂತೆ ಭೂಸುರ ಗಢಣದಿ ಮೆರೆವ
ಕರಿ ಚರ್ಮಾಂಬರ ಪ್ರೀತ ವರದೇಂದ್ರನೆ ನಿರುತ
ಸದ್ಧರ್ಮ ಮರ್ಮವರಹುವ ಯತಿನಾಥ
ಭರಿತ ಸದ್ಭಕ್ತಿಯಿಂದ ಸ್ಮರಿಸುವ ಸುಜನಕ್ಕೆ
ಪರಮ ಸುಖವನಿತ್ತು ಪಾಲಿಪ ಮಹಾಮಹಿಮ
 ಸಿರಿಯರಸಭಿನವ ಪ್ರಾಣೇಶವಿಠಲನ 
ಕರವಶ ಮಾಡಿಕೊಂಡ ಪರಮ ಸಮರ್ಥ ಗುರುವೆ ॥ 1 ॥

 ಮಟ್ಟತಾಳ 

ಅಸುಪತಿ ಶ್ರೀಮಧ್ವಕಸವರ ಪೀಠಸ್ಥ
ವಸುಧೇಂದ್ರರ ಕರ ಬಿಸಜೋದ್ಭವನೀತ
ವಸುಧಿಜಾಪತಿ ಪಾದನಿಶ ಧೇನಿಸುವಾತ
ಶ್ವಸನ ಮತದ ಯಶವ ದಶದಿಶ ಪಸರಿಸಿದ
ಅಸಮ ಮಹಿಮ ಗುರುವೆ ನತಜನ ಸುರತರುವೆ
 ಋಷಭಾಭಿನವ ಪ್ರಾಣೇಶವಿಠಲ ನಾಮಾ
ರಸನೇಂದ್ರಿಯದಲ್ಲಿ ಹಸನಾಗಿ ನಿಲ್ಲಿಸೋ ॥ 2 ॥

 ತ್ರಿಪುಟತಾಳ 

ಪ್ರಾಣೇಶದಾಸರ ಜ್ಞಾನ ಭಕ್ತಿಗೆ ವಲಿದು
ಸಾನುರಾಗದಲಿಲ್ಲಿ ನೆಲಿಸಿದ ಗುರುದೇವ
ಕ್ಷೋಣಿಯೋಳ್ಲಿಂಗಸೂರು ಕರುಣಿಕ ವಂಶವ
ಮಾಣದೆ ಪೊರೆಯಲು ಬಂದ ಕರುಣಿ
ಆನತ ಜನಮನಾಭಿಷ್ಟವ ಸಲಿಸುವ
ದೀನ ದಯಾಳು ಸಜ್ಜನಗೇಯನ
 ಜಾನಕೀಶಾಭಿನವ ಪ್ರಾಣೇಶವಿಠಲನ 
ಪ್ರಾಣ ಪದಕನಾದ ಮೌನಿ ಮಾನದ ದಾನಿ ॥ 3 ॥

 ಅಟ್ಟತಾಳ 

ವರದೇಂದ್ರ ಗುರುರಾಜರಿರುವ ಕಾರಣವಿಲ್ಲಿ 
ಬರುವುದು ಸಜ್ಜನ ವೃಂದ ನಿರುತದಲ್ಲಿ 
ಧರಿಸುರ ನಿಕರದಿ ಗುರುವಾಸರದಲ್ಲಿ 
ಪರಮ ವೈಭವದಿಂದ ಮೆರೆವ ವಂದಣದಲ್ಲಿ 
ವರುಷ ವರುಷ ಸಿತ ಕರ್ಕ ಸಪ್ತಮಿಯಲ್ಲಿ 
ವರ ರಥವೇರಿ ಚತುರ ಪಥದೊಳು ಸಾಗಿ 
ಬರುವಂಥ ಗುರುಗಳ ದರುಶನ ಕೊಳ್ಳಲು 
ಪರಿಹಾರ ಪರಿಹಾರ ದುರಿತ ರಾಶಿಗಳೆಲ್ಲಾ 
ಧರಣಿ ದೇವರುಗಳ ವರವೇದ ಘೋಷಣ 
ಹರಿದಾಸರು ಗೈವ ಭಜನ ಸುನರ್ತನ 
ಪರಮ ಸಂಭ್ರಮಗಳ ವರಣಿಸಲಳವಲ್ಲ 
 ಕರಿವರದಭಿನವ ಪ್ರಾಣೇಶವಿಠಲನ ದೂತ 
ವರದೇಂದ್ರ ಯತಿವರರಿರುವ ಕಾರಣವಿಲ್ಲಿ ॥ 4 ॥

 ಆದಿತಾಳ 

ಈತನ ಸೇವಿಸಲು ಪಾತಕಗಳಳಿವವು
ಭೂತಪ್ರೇತ ಪಿಶಾಚಾದಿಗಳು ಪೋಪವು
ಈತನ ಸೇವನೆಯಿಂದ ಜ್ಞಾನ ಸಂತಾನವಕ್ಕು
ಈತನ ಪಾದೋದಕದಿಂದ ರೋಗ ಪರಿಹಾರ
ಈತನ ಪ್ರಸಾದದಿಂದ ಗಾತರ ಪುನೀತವಯ್ಯ
ಈತನ ನಂಬಿದ ಮನುಜನು ಪಡೆವಾಭಿಷ್ಟ
ಈತನಲ್ಲಿಗೆ ಬಾರದಾತನೆ ಮಹಾ ಭ್ರಷ್ಟ
ಸೋತುಮ ಗುರುವೆಂದು ಆತುಮ ಸಮರ್ಪಿಸಲು
ಪ್ರೀತಿಯಿಂದಲವನ ಕರ ಪಿಡಿದುದ್ಧರಿಸುವ
ಜಾತರೂಪ ಸಮಭಾಂಗ ಪಾತಕಾರಿ ವಾತದೂತ
ಭೂತಳದೊಳಗೆ ಯತಿನಾಥ ರಾಘವೇಂದ್ರ ಪ್ರೀತ
ಭೂತ ಭಾವನಾಭಿನವ ಪ್ರಾಣೇಶವಿಠಲನ 
ಮಾತು ಮಾತಿಗೆ ನೆನೆವಾತುರ ಮತಿಯ ನೀಯೋ ॥ 5 ॥

 ಜತೆ 

ನಿನ್ನ ಧ್ಯಾನವನಿತ್ತು ಯನ್ನನುದ್ಧರಿಸಯ್ಯ
 ಮಾನ್ಯಾಭಿನವ ಪ್ರಾಣೇಶವಿಠಲ ಪ್ರೀಯ ॥
********