..
ರಕ್ಷಿಸೋ | ಬೇಗನೆ ಬಂದು ರಕ್ಷಿಸೊ | ಪ
ರಕ್ಷಿಸೊ ರವಿಕೋಟಿ ತೇಜ | ಜಗತ್
ಕುಕ್ಷಿನಂಬಿದೆ ಕಲ್ಪಭೂಜ | ಆಹಾ
ಪಕ್ಷೀಂದ್ರವಾಹನ | ಲಕ್ಷ್ಮೀಪತಿಯೆ ನೀನು
ಪೇಕಿಸದೆನ್ನನು ಈಕ್ಷಿಸಿ ಕರುಣದಿ ಅ.ಪ
ಕೇಶವ ಖಳಕುಲ ನಿಧನ | ನರ
ಕೇಸರಿ ಶ್ರೀಹಯವದನ | ಗುರು
ಕೀಶ ನಮಿತ ಪಾದ ನಳಿನ | ಸಮೀ
ರಾಶನ ಪರ್ಯಂಕಶಯನ | ಆಹಾ
ದಾಶರಥಿಯೆ ಭವದಾಶೆ ಬಿಡಿಸಿ ತವ |
ದಾಸ ಜನರ ಸಹವಾಸದೋಳಿಟ್ಟನ್ನ 1
ಪಶುಪಾಲ ಮಿಸುನೀಯ ವಸನ | ಧ್ರುವ
ಪಶುಪತಿ ಸುತ ಗುಣಪೂರ್ಣ | ದುಷ್ಟ
ಶಿಶುಪಾಲ ಮದವಿಭಂಜನ | ಪಾಹಿ |
ವಸುದೇವ ಸುತ ನಿರಂಜನ | ಆಹಾ |
ವಸುಗರ್ಭನ ಪೆತ್ತ ಕುಸುಮದಳೇಕ್ಷಣ |
ವಸುಮತಿಯೊಳು ಎನ್ನ ಪಿಸುಣನೆಂದೆನಿಸದೆ 2
ನಾಶರಹಿತ ವನಮಾಲ | ಧರ
ಶ್ರೀಶಾಮಸುಂದರವಿಠಲ | ಗುಡಾ
ಕೇಶ ವರದ ಸುಶೀಲ | ಪಾಕ |
ಶಾಸನಾನುಜ ಗಾನಲೋಲ | ಆಹಾ |
ಪೂಶರಪಿತ ಸ್ವಪ್ರಕಾಶ ಪರಮ | ವಿ
ಲಾಸವ್ಯಾಸ ಮಹಿದಾಸ ಲೋಕೇಶನೆ 3
***