Audio by Mrs. Nandini Sripad
ಶ್ರೀ ಅಭಿನವ ಪ್ರಾಣೇಶವಿಠಲದಾಸಾರ್ಯ ವಿರಚಿತ ಶ್ರೀ ವರದೇಂದ್ರರ ಪ್ರಾರ್ಥನಾ ಸುಳಾದಿ
ರಾಗ ಕಲ್ಯಾಣಿ
ಧ್ರುವತಾಳ
ವಂದಿಸುವೆನು ಭವ ಮಂದಧಿ ತಾರಕ
ಸಿಂಧು ಶಯನ ರಾಮಚಂದ್ರನಾರ್ಚಕ ವಸು -
ಧೇಂದ್ರರಾಯರ ಕರ ಮಂದಜೋದ್ಭವ ವರ -
ದೇಂದ್ರರಾಯನೆ ಯತಿ ಚಂದಿರನೆ
ಇಂದು ಪ್ರಾರ್ಥಿಪೆ ಕರ್ಮಂದಿಗಳರಸನೆ
ಕಂದರ್ಪಜಿತ ಶರ್ಮ ವೃಂದ ಸೇವ್ಯ
ಬೆಂದು ಭವದಿ ಬಹು ನೊಂದಿರುವೆನೋ ಸ್ವಾಮಿ ಮುಂದಾರಿಗಾಣದೆ ಕುಂದಿರುವೆ
ಬಂದು ಬೇಗನೆ ದಯದಿಂದ ಪಿಡಿಯೋ ಕೈಯ
ತಂದೆ ಅಭಿನವ ಪ್ರಾಣೇಶವಿಠಲ ಪ್ರಿಯ ॥ 1 ॥
ಮಟ್ಟತಾಳ
ಕೋಲಜಕೂಲದ ಆಲಯವಾಸರಿಂ -
ದೇಳನೆ ಯತಿ ಎನಿಸಿ ಕಾಲರಾಮರಾಜ್ಯ
ಪಾಲಿಸಿ ವಿಭವದಲಿ ಮೂಲರಾಮ ಚರಣ
ಊಳಿಗವನು ಗೈದ ಶೀಲ ಸುಗುಣಮಣಿಯೇ
ಕಾಲಭಿನವ ಪ್ರಾಣೇಶವಿಠಲ ಪಾದ
ಕೀಲಾಲಜ ಮಧುಪ ಲಾಲಿಸು ಬಿನ್ನಪ ॥ 2 ॥
ತ್ರಿಪುಟತಾಳ
ಭೂತಳದೊಳು ಮಹಾಪಾತಕಿ ನಾನಯ್ಯ
ಘಾತಕನು ಇತ್ತ ಮಾತು ತಪ್ಪುವನಯ್ಯ
ಆತುಮ ಭವ ಶಿವರಾತ್ಯೆ ಶರದಿಂದ
ನೀತಿ ತೊರೆದು ವಂಶಖ್ಯಾತಿ ಮರೆದು
ಸೀತಾಂಶು ಮುಖಿಯರ ಪ್ರೀತಿ ಚಿಂತನೆಯಲ್ಲಿ
ಬಾತುಕೋಳಿಯ ತೆರ ತಿರುಗಿದೆನು ದೇವ
ಮಾತು ಮಾತಿಗೆ ಎನ್ನ ಪೊಗಳಿಕೆ ಪೇಳುತ
ಖ್ಯಾತಿ ಕಾಮುಕನಾಗಿ ಕಾರ್ಯ ಮಾಡುವೆನಯ್ಯಾ
ಈ ತೆರವಾಗಿದೆ ಎನ್ನಯ ಸ್ಥಿತಿಗತಿ
ಭೀತನಾಗಿರುವೆನು ಕರುಣಿಸಯ್ಯ
ಸೀತಾಧವಭಿನವ ಪ್ರಾಣೇಶವಿಠಲನ
ದೂತಾಗ್ರಣಿ ಎನ್ನ ಮಾತು ಲಾಲಿಸು ಜೀಯಾ ॥ 3 ॥
ಅಟ್ಟತಾಳ
ಭರಿತ ಕ್ರೋಧದಿಂದ ಪರವಶನಾಗುತ
ಥರ ಥರ ನಡುಗುತ ಜರಿವೆನು ಸುಜನರ
ಪರಮ ವೈಷ್ಣವರ ಧರಣಿ ದೇವತೆಗಳ
ಹರಿದಾಸರ ನಿಂದ್ಯ ನಿರುತದಿಗೈಯುತ
ಖರನಂತೆ ಭುವಿಯೊಳು ಚರಿಸುತಿರುವೆನಯ್ಯ
ಉರುತರವಾದಂಥ ದುರಿತರಾಶಿಯು ಬಾಯ್
ತೆರೆದು ಬರುತಲಿದೆ ಉರಿಯ ನಾಲಿಗೆ ಚಾಚಿ
ಬರುತಲಿದೆ ನೋಡು ಕರಿಮೋರೆ ಕೆಂಜೆಡೆ
ಧರಿಸಿ ಬರುತಲಿದೆ ಭರದಿಂದ ಬರುತಿದೆ
ಪರಿಹಾರೋಪಾಯವನ್ನರಿಯದೆ ಬಳಲುವೆ
ವರಲುವೆ ಹಾಯೆಂದು ಚೀರುವೆ ಭೋರೆಂದು
ಪೊರೆವರನ್ಯರ ಕಾಣೆ ಕರಗಳ ಜೋಡಿಸಿ
ಶರಣು ಬಂದಿರುವೆನು ಗುರುರಾಜ ರಕ್ಷಿಸು
ಶರಣನ ಪಿಡಿಕೈಯ ವರದೇಂದ್ರ ಗುರುರಾಯ
ಮುರಗೇಡಿಯಭಿನವ ಪ್ರಾಣೇಶವಿಠಲನ
ಚರಣವಾರಿಜ ಭೃಂಗನತದಯಾಪಾಂಗಾ ॥ 4 ॥
ಆದಿತಾಳ
ಆ ಮಹಾಮದದಿಂದ ಭ್ರಾಮಕ ತ್ರಯದಿಂದ
ಸೀಮೆ ಗಾಣದ ಲೋಭ ಮತ್ಸರದಂಭದಿಂದ
ತಾಮಸಿವರನಾದ ಪಾಮರ ನಾನಯ್ಯ
ಭಾಮಾ ಕಾಂಚನ ಮೇಣ್ ಭೂಮಿಯ ಚಿಂತನ
ಯಾಮ ದಿವಸ ಕಾಲ ಹೋಮವಾಯಿತು ಸ್ವಾಮಿ
ಭೀಮ ಪ್ರಿಯಭಿನವ ಪ್ರಾಣೇಶವಿಠಲನ
ನೇಮದಲರ್ಚಿಪ ಧೀಮಂತನತಿಶಾಂತನೇ ॥ 5 ॥
ಜತೆ
ದುರಿತಗಳೋಡಿಸು ಹರಿಕಥಾಮೃತವುಣಿಸು
ದರಧರ ಅಭಿನವ ಪ್ರಾಣೇಶವಿಠಲನ ದೂತ ॥
********