ಗಂಗಾದಿತೀರ್ಥ ಫಲಂಗಳ ನೀವುದು ಹರಿಯ ನಾಮ l
ಹಿಂಗದೆ ಜನರಿಗೆ ಮಂಗಳವೀವುದು ಹರಿಯ ನಾಮ ll ಪ ll
ವೇದಶಾಸ್ತ್ರಂಗಳ ಅರಿಯದ ಜನರಿಗೆ
ಹರಿಯ ನಾಮ ಜಗ l
ದಾದಿಪುರುಷನನು ಪೂಜಿಸಿದವರಿಗೆ ಹರಿಯ ನಾಮ ll
ಸಾಧಿಸುವೆವು ಪರವೆಂಬಂಥ ಜನರಿಗೆ ಹರಿಯ ನಾಮ l
ಶೋಧಿಸಿ ಇಟ್ಟ ಚಿನ್ನದ ಗಟ್ಟಿ ಕಾಣಿರೊ ಹರಿಯ ನಾಮ ll 1 ll
ಸ್ನಾನ ಜಪಂಗಳ ಸಾಧಿಸಿದವರಿಗೆ ಹರಿಯ ನಾಮ l
ದಾನಧರ್ಮಕೆ ಒದಗದ ಮನುಜರಿಗೆ ಹರಿಯ ನಾಮ l
ಧ್ಯಾನವೊಂದರಿಯದ ಮೂಢಾತ್ಮ ಜನರಿಗೆ ಹರಿಯ ನಾಮ l
ಮನುಷ್ಯ ಜನ್ಮವ ಪಾವನ ಮಾಡುವುದು ಹರಿಯ ನಾಮ ll 2 ll
ವೇಳೆವೇಳೆಗೆ ವೆಚ್ಚ ವ್ಯಯಗಳ ನೀವುದು ಹರಿಯ ನಾಮ l
ಜಾಳಿಗೆ ಮಾಳಿಗೆ ಮನೆಯ ನೆಚ್ಚದೆ ಪೇಳಿ ಹರಿಯ ನಾಮ ll
ಕಾಲನವರು ಬಂದು ಕದಲಲಾಗದ ಮುನ್ನ ಹರಿಯ ನಾಮ l
ಶ್ರೀಲೋಲ ಪುರಂದರವಿಟ್ಠಲನ ಒಲುಮೆಗೆ ಹರಿಯ ನಾಮ ll 3 ll
***