Audio by Mrs. Nandini Sripad
ಗುರುಗಳ ಕರುಣಾಭಾಗ್ಯ ಸುಳಾದಿ
ರಾಗ ದರ್ಬಾರಿಕಾನಡ
ಧ್ರುವತಾಳ
ಗುರುಗಳ ಕರುಣವೆ ದಾರಿದ್ರ್ಯ ಭಂಜನ
ಗುರುಗಳ ಕರುಣವೆ ಮಹದೈಶ್ವರ್ಯ ಕಾರಣ
ಗುರುಗಳ ಕರುಣವೆ ಸಕಲ ರೋಗ ಹರಣ
ಗುರುಗಳ ಕರುಣವೆ ಸಕಲ ದುಃಖನಾಶನ
ಗುರುಗಳ ಕರುಣವೆ ಸಕಲ ಸುಖಸಾಧನ
ಗುರುಗಳ ಕರುಣವೆ ಪರಮ ಮಂಗಲಪ್ರದ
ಗುರುಗಳ ಕರುಣವೆ ದುರಿತಾಂಬುಧಿಗೆ ನೌಕಾ
ಗುರುಗಳ ಕರುಣವೆ ಭೂತ ಪ್ರೇತೋಚ್ಛಾಟನೆ
ಗುರು ರೂಪ ನಾಮ ಕ್ರಿಯಾ ಬಾದರಾಯಣವಿಠಲ
ಗುರುಪಾದ ಶರಣನ್ನ ಅಪರಾಧವೆಣಿಸಾನು ॥ 1 ॥
ಮಟ್ಟತಾಳ
ಗುರುಗಳ ಕರುಣವೆ ಉತ್ತುಂಕನ ಪಾಲಿಸಿತು
ಗುರುಗಳ ಕೃಪೆಯಿಂದಾ ಧೃವನಿಗೆ ಹರಿವಲಿದಾ
ಗುರುಗಳ ದಯದಿಂದಾ ಪ್ರಹ್ಲಾದನು ಗೆದ್ದಾ
ಗುರು ಕರುಣಿಸಲು ಸಂಚಿತಾಗಾಮಿ ಒಂ -
ದರ ನಿಮಿಷದಿ ಸುಟ್ಟು ಪೋಗುವದೆ ಸತ್ಯಾ
ಗುರು ಕರುಣವೆ ತಾರಕ
ಗುರು ಮೂರುತಿ ಬಾದರಾಯಣವಿಠಲ ಗುರು
ಶರಣರಿಗೊಲಿದಂತೆ ಅನ್ಯ ಜನರಿಗೊಲಿಯಾ ॥ 2 ॥
ತ್ರಿವಿಡಿತಾಳ
ಗುರುಗಳ ಚರಣಾಬ್ಜ ಸ್ಮರಿಸಿದ ಫಲಕ್ಕಿನ್ನು
ಸರಿಯಾದ ಪುಣ್ಯ ಈ ಧರೆಯೊಳುಂಟೆ
ಸುರಭಿನಿಕರ ಚಾಮಿಕರ ಸಿರಿ ಕನ್ಯಾ
ಮಂದಿರ ಧರಣಿ ದಾನಕ್ಕಧಿಕ ಕಾಣೋ
ಬರೆ ಮಾತಲ್ಲವೋ ತ್ರಿಕರಣ ಸಾಕ್ಷಿವೈಯ್ಯಾ
ಗುರುವೆ ಪರದೈವಾ ಗುರುವೆ ದೈವಾ
ಗುರುವಂತರ್ಯಾಮಿ ಶ್ರೀಬಾದರಾಯಣವಿಠಲ
ಗುರುವೆಂದೆನಿಸಿ ತನ್ನ ಶರಣ ಜನರ ಕಾವಾ ॥ 3 ॥
ಅಟ್ಟತಾಳ
ಅನುಭವವಾದ ಮಾತನು ಪೇಳುವೆನು ಕೇಳಿ
ಮನಸ್ಸಿನ ಕೌಟಿಲ್ಯವನ್ನು ಬಿಟ್ಟಾದರದಿಂದಾ
ಗುಣವಂತ ಗುರುದಯವನು ಪಡಿಯದೆ ಕೆಟ್ಟಾ
ಮನುಜ ಜನ್ಮದಕ್ಕಿಂತ ಕತ್ತೆಯಾದರೆ ಲೇಸು
ಗುಣಪುರ್ಣ ಗುರು ಬಾದರಾಯಣವಿಠಲ
ಆತನ ಕಡೆ ನೋಡಾ ಆಕಡೆ ಸುಳಿದಾಡ ॥ 4 ॥
ಆದಿತಾಳ
ಪರಗತಿ ಬೇಕಾದ ಪುರುಷರು ಪರತರ
ಗುರು ಪಾದಾಶ್ರಯ ನಿರತರಾದ ವರ ಮಂ -
ದಿರ ಬಾಕುಳಿತನ ಧರಿಸಿ ಆದರದಿ ಅವರ
ಪರಿವಾರವನುಸರಿಸಿ ಆಜ್ಞಾ ಮೀರದತಿ
ಜರಿದಪಹಾಸ ಮಾಡದೆ ಪರಮ ಸಂತೋಷ ತಾಳಿ
ಕೊರಗುವ ಮಾತಾಡೆ ಕೊರತೆ ಮನಕ್ಕಿಲ್ಲಾದೆ
ಪರಿಚರಿಸುತಲೀರೆ ಪರಮ ಪ್ರೀತಿಯಿಂದ
ಶಿರಿಗುರು ಅಜಗುರು ಸಕಲ ಜಗದ್ಗುರು
ಶಿರಿ ಬಾದರಾಯಣವಿಠಲ ಕರುಣ
ದರುಶನ ಕೊಡುವನು ಮನಮಂದಿರದೊಳು ॥ 5 ॥
ಜತೆ
ಗುರು ಪಾದೋದಕ ಗುರುಚ್ಛಿಷ್ಟ ಭುಂಜಿಸಿ
ಗುರುವಂತರ್ಯಾಮಿ ಶ್ರೀಬಾದರಾಯಣವಿಠಲನ ನಂಬು ॥
*************