ರಾಗ : ಮುಖಾರಿ ತಾಳ : ಅಟ್ಟ
ನನ್ನಿಂದ ನಾನೇ ಜನಿಸಿ ಬಂದೆನೆ ದೇವ
ಎನ್ನ ಸ್ವತಂತ್ರವು ಲೇಶವಿದ್ದರು ತೋರು ।।ಪ।।
ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆ
ನಿನ್ನದು ತಪ್ಪೊ ಎನ್ನದು ತಪ್ಪೊ ಪರಮಾತ್ಮ ।।ಅ.ಪ।।
ಜನನಿಯ ಜಠರದಿ ನವಮಾಸ ಪರಿಯಂತ
ಘನದಿ ನೀ ಪೋಷಿಸುತಿರೆ ನಾನು
ಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದೆ
ವನಜಾಕ್ಷ ನೂಕಿದವನು ನೀನಲ್ಲವೆ ದೇವ ।।೧।।
ಅಂಧಕನ ಕೈಯಲಿ ಕೋಲಿತ್ತು ಕರೆದೊಯ್ವ
ಮುಂದಾಳು ತಪ್ಪಿ ಗುಂಡಿಗೆ ಕೆಡಹಲು
ಅಂಧಕನದು ತಪ್ಪೊ ಮುಂದಾಳಿನ ತಪ್ಪೊ
ಹಿಂದಾಡಬೇಡ ಎನ್ನಲಿ ತಪ್ಪಿಲ್ಲವೋ ದೇವ ।।೨।।
ಕಂದನ ತಾಯಿಯು ಆಡಿಸುತಿರೆ ಪೋಗಿ
ಕಂದನು ಬಾವಿಯ ಅಂದು ನೋಡುತಿರೆ
ಬಂದು ಬೇಗದಿ ಬಿಗಿದಪ್ಪದಿರಲು ಆ
ಕಂದನ ತಪ್ಪೊ ಮಾತೆಯ ತಪ್ಪೊ ಪರಮಾತ್ಮ ।।೩।।
ಭಾರವು ನಿನ್ನದೊ ದೂರು ನಿನ್ನದೊ ಕೃಷ್ಣ
ನಾರಿ ಮಕ್ಕಳು ತನು ಮನ ನಿನ್ನವಯ್ಯ
ಕ್ಷೀರದೊಳದ್ದು ನೀರೊಳಗದ್ದು ಗೋವಿಂದ
ಹೇರನೊಪ್ಪಿಸಿದ ಮೇಲೆ ಸುಂಕವೇತಕೆ ದೇವ ।।೪।।
ಎಲವುಗಳ ಜಂತೆ ಮಾಡಿ ನರಗಳ ಹುರಿಯಿಂ
ಹೊಲಿದು ಚರ್ಮವ ಹೊದಿಸಿ ದೇಹದೊಳು
ಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿ
ನೆಲಸಿ ಚೇತನವನಿತ್ತವ ನೀನಲ್ಲವೆ ।।೫।।
ಜನಿಸಿದಾರಭ್ಯದಿಂದ ಇಂದಿನ ಪರಿಯಂತ
ಘನಘನ ಪಾಪ ಸುಕರ್ಮಂಗಳನು
ಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲ
ಅನುಭವಿಸುವುದು ಜೀವನೊ ನೀನೊ ದೇವ ।।೬।।
ನ್ಯಾಯವಾದರೆ ದುಡುಕು ನಿನ್ನದೊ ಮತ್ತ-
ನ್ಯಾಯವಾದರೆ ಪೇಳುವರಾರು ?
ಕಾಯಜಪಿತ ಕಾಗಿನೆಲೆಯಾದಿಕೇಶವ
ರಾಯ ನೀ ಕಾಯಯ್ಯ ತಪ್ಪುಗಳೆಣಿಸದೆ ।।೭।।
***
Nanninda nane janisi bandene deva
Enna svatantravu lesaviddaru toru ||pa||
Ninna preraneyinda nadedu nudida mele
Ninnadu tappo ennadu tappo paramatma ||a.pa||
Jananiya jatharadi navamasa pariyanta
Ganadi ni poshisutire nanu
Janisalarenu ene janisendikkaladinde
Vanajaksha nukidavanu ninallave deva ||1||
Andhakana kaiyali kolittu karedoyva
Mundalu tappi gundige kedahalu
Andhakanadu tappo mundalina tappo
Hindadabeda ennali tappillavo deva ||2||
Kandana tayiyu adisutire pogi
Kandanu baviya amdu nodutire
Bandu begadi bigidappadiralu A
Kandana tappo mateya tappo paramatma ||3||
Baravu ninnado duru ninnado krushna
Nari makkalu tanu mana ninnavayya
Kshiradoladdu nirolagaddu govinda
Heranoppisida mele sumkavetake deva ||4||
Elavugala jante madi naragala huriyim
Holidu charmava hodisi dehadolu
Malamutrake horadari nirmisi hrudayadali
Nelasi cetanavanittava ninallave ||5||
Janisidarabyadimda indina pariyanta
Ganagana papa sukarmamgalanu
Manake bodhisi madisi munde idanella
Anubavisuvudu jivano nino deva ||6||
Nyayavadare duduku ninnado matta-
Nyayavadare peluvararu ?
Kayajapita kagineleyadikesava
Raya ni kayayya tappugalenisade ||7||
***