..
kruti by ವಿದ್ಯಾರತ್ನಾಕರತೀರ್ಥರು vidyaratnakara teertharu
ಬೆಟ್ಟದ ಶೃಂಗವ ಹತ್ತಿ ಧುಮುಕುವೆ ನಾನು
ಕೃಷ್ಣನೇ ಸರ್ವೋತ್ತಮ ಮತ್ತಾರೊಬ್ಬರಿಲ್ಲವೆಂದು ಪ
ಪಂಕಜಾಸನಾಹಿಪ ಶಂಕರಾದಿಗಳು ಹರಿಗೆ
ಕಿಂಕರರು ಮತ್ತು ಇವಗೆ ಪುತ್ರ ಪೌತ್ರರು
`ಏಕೋ ನಾರಾಯಣ ಆಸೀನ್ನಬ್ರಹ್ಮೇ'ತಿ ಶ್ರುತಿಯೊಂದೇ
ಸಾಕೊ ಮತ್ತಿನ್ಯಾಕೆ ಸಂಶಯ ಹರಿ ನೀನೆ ಗತಿಯೆಂದು 1
`ಯಂಕಾಮಯೇ' ಎಂಬ ಶ್ರುತಿ ಪಂಕಜಾಸನಾನಿಲ
ಶಂಕರರೆಲ್ಲರೂ ಹರಿಕಿಂಕರರು ಸಿರಿಗೆ
ಕಿಂಕರರೆಂಬುದ ನಿಶ್ಶಂಕವಾಗಿ ಪೇಳಲು
ಶಂಕೆ ಯಾಕೊ ಸಲಹೊ ಶ್ರೀ ಪಂಕಜಲೋಚನನೆಂದು 2
ಜಾನಕಿ ವಿಯುಕ್ತನಾಗಿ ಕ್ಲೇಶಗಳಪಟ್ಟಿರುವ
ಮತ್ತು ಜರಾಸಂಧಗಂಜಿ ಬೆಟ್ಟವೇರಿದನು
ಇತ್ಯಾದಿ ಭ್ರಾಂತಿ ಯಾಕೊ ನಿರವದ್ಯ ನಿರನಿಷ್ಟ
ಎಂಬೊ ಶ್ರುತಿಯನ್ನೆ ನೋಡಿ ನಿರ್ದೋಷನಿದನೆಂದು 3
ದೇವದತ್ತ ಯಜ್ಞದತ್ತ ಮೊದಲಾದ ಜನರಂತೆ
ಪುರುಷನಾದ ಮೇಲೆ ಇವನಲ್ಪಗುಣನು
ಎಂಬ ದುರ್ಮತಿಯ ಬಿಟ್ಟು ಗುಣಶ್ರುತ ಸವಿರುದ್ಧ
ಎಂಬೋ ಶ್ರುತ್ಯರ್ಥವ ತಿಳಿದು ಹರಿಗುಣಪೂರ್ಣನೆಂದು 4
ಸೋಮಕುಲಶೇಖರನೆ ಭಾಮಾವಲ್ಲಭ ಬಲ
ರಾಮನಿಗೆ ಸಹೋದರ ಸಾಮಗಪ್ರಿಯ
ಶ್ರೀಮನ್ನಾಮಗಿರಿ ಶ್ರೀ ಸ್ವಾಮಿ ನೃಹರಿಯೆ ವಿದ್ಯಾ
ರತ್ನಾಕರ ಯೋಗಿಯನ್ನು ಹರಿ ನೀನೆ ರಕ್ಷಿಸೆಂದು 5
***