ಬಂದನಿದಕೋ ರಂಗ ಬಂದನಿದಕೋ
ಸುಂದರಾಂಗನು ನಮ್ಮ ಮಂದಿರಕೆ ಈಗಾ ಪ.
ಮುಗಳುನಗೆ ಮುಖದಲ್ಲಿ ಮುಂಗುರುಳು ನವಿಲುಗರಿ
ಖಗರಾಜ ವಾಹನನ ಕಂಬು ಕಂಠಾ
ಝಗ ಝಗಿಪ ಕುಂಡಲವು ಕಸ್ತೂರಿ ತಿಲಕ ಫಣಿ
ನಗಧರನು ನಮ್ಮ ಮನಸೂರೆಗೊಂಬುದಕೇ 1
ಕರದಲಿ ಕಂಕಣವು ಬೆರಳಲ್ಲಿ ಉಂಗುರವು
ಕೊರಳಲ್ಲಿ ನವರತÀ್ನ ಮುತ್ತಿನಹಾರಗಳೂ
ಕಿರುಗೆಜ್ಜೆ ನಡುವಿನಲಿ ವಲಿವೋ ಪೀತಾಂಬರವು
ವರ ವೇಣು ವಯ್ಯಾರದಿಂದ ಊದುತಲೀ 2
ಸುರರ ವಂಚನೆಗೈದು ವರ ಋಷಿಗಳನೆ ಜರಿದು
ಸಿರಿಗಗೋಚರನೆನಿಸಿ ಪರಮ ಪುರುಷಾ
ವರಧಾಮತ್ರಯಗಳನೂ ಮರದೆಮ್ಮ ಗೋಕುಲದಿ
ಮೆರೆವ ನೀ ಲೋಕಮೋಹನ ಚರಿಯ ತೋರೀ 3
ಇಂದಿರೇಶನು ನಮ್ಮ ವೃಂದಾವನದೊಳಿಪ್ಪ
ಮಂದಿಗಳ ಮನ ಸೆಳೆದು ಮಾರಜನಕಾ
ಒಂದೊಂದು ರೂಪಿನಲಿ ಗೋಪಿಕಾ ಸ್ತ್ರೀಯರೊಳು
ಬಂದು ಬೆರೆಯುವ ಮದನಕಲೆ ನಿಪುಣ ಚೆಲುವಾ 4
ಗೋವರ್ಧನೋದ್ಧಾರ ಗೋವಳರ ವಡಗೂಡಿ
ಗೋವುಗಳ ಕಾಯತಲಿ ಗೋಪಿ ಬಾಲಾ
ಗೋವಿಂದ ಗೋಪಾಲಕೃಷ್ಣವಿಠಲ ನಮ್ಮ
ಪೂರ್ವ ಪುಣ್ಯದ ಫಲದಿ ಭೂವನಿತೆ ಪಾಲಾ 5
****