ಪೊಡವಿ ಪತಿಯೇ ನಿನ್ನಾ ಅಡಿಗಳಿಗೆರಗುವೆ
ಕೊಡು ಭಕ್ತಿ ನಿನ್ನೊಳು ರಾಘವಾ
ತಡೆಯಲಾರೆನೋ ಈ ಕಡುತಾಪದಿಂದೆನ್ನ
ಕಡೆಗ್ಹಾಯಿಸೆನ್ನ ಶ್ರೀ ರಾಘವಾ ಪ
ಧರಣೀಶ ನಿನ್ನ ಚರಣವೇ ಗತಿ ಎಂದು
ಸ್ಮರಿಸುತ್ತಲಿರುವೆನೋ ರಾಘವಾ
ಸ್ಥಿರ ಭಕುತಿಯ ನಿನ್ನೊಳಿರಿಸಿ ಸತ್ವರದಿಂದ
ಕರುಣಿಸಿ ಸಲಹೈಯಾ ರಾಘವಾ 1
ಪುಟ್ಟಿದುದಕೆ ನೀ ಹೊಟ್ಟೆಗೆ ಸಾಕಷ್ಟು
ಕೊಟ್ಟು ಕಾಪಾಡೊ ಶ್ರೀ ರಾಘವಾ
ಇಟ್ಟು ತವ ಸ್ಮರಣೆಯ ಕೊಟ್ಟೆನ್ನ
ಪುಷ್ಟವ ಮಾಡೋ ಶ್ರೀ ರಾಘವಾ 2
ತನು ಧನ ನೀನೆ ಜನನಿ ಜನಕನು ನೀನೆ
ವನಿತೆ ಸುತರು ನೀನೆ ರಾಘವಾ
ಹನುಮೇಶ ವಿಠಲನೆ ದಿನಗಳೆಯದೇ ತ್ವರ
ಮನದಘ ಬಿಡಿಸೋ ಶ್ರೀ ರಾಘವಾ 3
****