Showing posts with label ರಾಯರೆಂದು ಕರೆದ ಮಾತ್ರದೀ ನಿರುತನಮ್ಮ ramakanta vittala. Show all posts
Showing posts with label ರಾಯರೆಂದು ಕರೆದ ಮಾತ್ರದೀ ನಿರುತನಮ್ಮ ramakanta vittala. Show all posts

Monday 6 September 2021

ರಾಯರೆಂದು ಕರೆದ ಮಾತ್ರದೀ ನಿರುತನಮ್ಮ ankita ramakanta vittala

 ankita ರಮಾಕಾಂತವಿಠಲ  

ರಾಗ: [ಬಿಲಹರಿ] ತಾಳ: [ತಿಶ್ರನಡೆ ಆದಿ]


ರಾಯರೆಂದು ಕರೆದ ಮಾತ್ರದೀ ನಿರುತನಮ್ಮ

ಕಾಯುವಂಥ ಕರುಣಾಪೂರ್ಣರು


ತೋಯಜಾಕ್ಷನಮಲಗುಣದಿ

ತೋಯುವಂತೆ ಮಾಡಿ ಭವದಿ

ನೋಯಗೊಡದುದ್ಧರಿಪ ಲೋಕ-

ಪ್ರಿಯ ಯತಿ ಶ್ರೀ ರಾಘವೇಂದ್ರ ಅ. ಪ


ಮಧ್ವಮತದ ಸಾರತತ್ತ್ವ ಸುಜ್ಞಾನಿಜನಕೆ

ಶುದ್ಧಭಾವದಿಂದ ಬೋಧಿಸಿ

ಉದ್ಧರಿಸುತ ಮಂದಜನಕೆ

ಭದ್ರಗತಿಯ ತೋರಿ ಭವ ಸ-

ಮುದ್ರದಿಂದ ಪಾರುಗೈವ ಪ್ರ-

ಸಿದ್ಧ ಪರಿಮಳಾರ್ಯರಿವರು 1

ಜೀಯ ನೀನೆ ಗತಿಯು ಎನ್ನುತ ಮೊರೆಯನಿಡಲು

ತಾಯಿಯಂತೆ ಕರೆದು ಪೋಷಿಪ

ವಾಯು ಒಲುಮೆ ಪಡೆದ ವಜ್ರ-

ಕಾಯರಿವರು ಆರ್ತಜನರ

ಕಾಯುವಂಥ ಕರುಣಿ ಭಕ್ತ

ಪ್ರಿಯರೆಂದು ಖ್ಯಾತಿಗೊಂಡ 2

ಏನು ದಯವೊ ಭಕ್ತ ಜನರೊಳು ಜ್ಞಾನಿಯರಸ

ದೀನರಾಗಿ ಬರುವ ಸುಜನರ

ನಾನಾಪರಿಯ ಈಪ್ಸಿತಗಳ 

ಪೂರ್ಣಗೊಳಿಸಿ ಪ್ರತಿಭೆಯಿಂದ

ಮೌನಿಕುಲ ಸನ್ಮಾನ್ಯನೆಂದು

ನಾನಾಸ್ತುತಿಯ ಕೊಳುತ ಮೆರೆವ 3

ಮಂಗಳಾಂಗರಿವರ ನೋಡಿರೊ ಅಘವಹರಿವ

ತುಂಗಭದ್ರನದಿಯ ತೀರದಿ

ಶೃಂಗರಿಸಿದ ವೃಂದಾವನದಿ

ಕಂಗೊಳಿಸುತ ದಾಸಜನರ

ಸಂಗ ಮಧ್ಯವರ್ತಿ ಶೋಭ-

ನಾಂಗ ದಿವ್ಯ ದಂಡಧಾರಿ 4

ಕರ್ತೃ ರಮಾಕಾಂತವಿಠಲನ ದಯಕೆ ಸ-

ತ್ಪಾತ್ರ ಮಂತ್ರಮನೆ ನಿವಾಸನ

ಅರ್ಥಿಯಿಂ ಸೇವಿಸಲು ಕಾಮಿ-

ತಾರ್ಥವ ಕೊಡುವ ಕಲ್ಪತರುವು

ಭಕ್ತಿಲಷ್ಟಾಕ್ಷರದಿ ನಮಿಸೆ

ಮುಕ್ತಿ ಕೊಡುವ ಶಕ್ತರಿವರು 5

***