ಶ್ರೀವಿಜಯದಾಸಾರ್ಯ ವಿರಚಿತ ಶ್ರೀಕೃಷ್ಣಾವತಾರ ಸುಳಾದಿ
ರಾಗ ಕೇದಾರಗೌಳ
ಝಂಪೆತಾಳ
ತರ ತರ ತರ ತರ ತರ ತರ ತರನೆ ನಿನ್ನ ನಡುಗಿಸಿ
ಕರ ಕರ ಕರ ಕರ ಕರ ಕರ ಕರದು ನಿನ್ನ ನಿಲಿಸಿ
ಸರ ಸರ ಸರ ಸರ ಸರ ಸರ ಸರನೆ ನಿನ್ನ ವಲಿಸಿ
ವರ ವರ ವರ ವರ ವರ ವರ ವರಗಳನು ಪಡಿಯದಲೆ ಬಿಡುವನೆ
ಸಿರಿಯೊಡಿಯ ಸರರೊಡಿಯ ಎನ್ನೊಡಿಯಾ ಜಗದೊಡಿಯ
ಮರಿಯದಲೆ ನೋಡು ತಡಿಯದಿರು ಮುಂದೆ ಎನಗೊಂದೆ ಪೇಳು -
ತ್ತರವ ಇಂದೆ ಇರು ಕೊಡದೆ ಬಿಡುವೆನೆ ಜಗದ ತಂದೆ
ಪರಮುಖ ನೀನಾಗೆ ನಿನ್ನಯ ಚರಣದಡಿಗಳಲಿ
ಶಿರಸಾ ಪವಡವನು ಕೊಡುವ ಜೀಯಾ
ಕರುಣಿ ನೀನೆಂದು ಮೊರೆ ಪೊಕ್ಕು ಬೇಡಿದರೆನ್ನ
ಸರಕು ಮಾಡದಲೆ ತೊರಗುವದು ಏನೋ
ಪರಿಪೂರ್ಣ ಗುಣನಿಧಿ ವಿಜಯವಿಟ್ಠಲ ನಿನ್ನ
ಚರಣದುಂಗುಟದ ಮಂದಿರದ ನೆಳಲೆ ಬೇಕು ॥ 1 ॥
ಮಟ್ಟತಾಳ
ಭಂಡು ದೇವರಿಗೆ ಲೆಂಡಪ್ರತಿ ಎಂಬೋದು
ಮಂಡಲದೊಳಗಿದು ಸಹಜ ನೀತಿ
ಭಂಡು ದೇವನೆ ನೀನು ನಂದಗೋಕುಲದಲ್ಲಿ
ಲೆಂಡ ಗೊಲ್ಲತಿಯರು ಅವರೆ ನಿನಗೆ ಮಟ್ಟು
ತೋಂಡನಾಗಿ ನಿನ್ನ ಕೊಂಡಾಡಲು ಶಿ -
ಖಂಡಿಯಾಗಿ ಇದ್ದಿ ನಿನಗೆ ಅವರೆ ಮಟ್ಟು
ಕುಂಡ ಗೋಳಕರ ಮಂಡೆ ಮೇಲೆ ಇದ್ದು
ಭಂಡುಗಾರ ಗೊಲ್ಲ ವಿಜಯವಿಟ್ಠಲಾ ॥ 2 ॥
ತ್ರಿವಿಡಿತಾಳ
ಕದ್ದಾ ಶುದ್ಧೀಗೆ ದಧಿಪಾಲಾಗೆ ವಶನಾಗೆ
ಬದ್ಧಾದಿಂದಲಿ ಬಂದು ಅವನು ಕೇಳಿದ ಮಾತು
ಸಿದ್ಧಾಂತವೆಲ್ಲಾ ವಳಿಕೆ ಪೇಳಿದವರಾರು
ಈ ಧರೆಯೊಳಗೆ ಧರ್ಮಕೆ ಕಾಲಾ ನಡೆಯದೆಂದೂ
ನಿರ್ಧರವಾಗಿದೆ ಎನಗೆ ನೋಡಲಿ ಇಂದು
ಅಬ್ಧಿಶಯನ ನಿನ್ನ ವರ್ಮ ವರ್ಮಗಳಾ
ಇದ್ದಾವು ಅಲ್ಲಲ್ಲಿ ದೂರಾದಲ್ಲದೆ ನೀನು
ಹೊದ್ದಿ ಇಪ್ಪದು ಸಟಿ ವಿಜಯವಿಟ್ಠಲ ಸಿರಿ
ಮುದ್ದು ಮುಖದ ಚಲುವ ಸಿದ್ಧ ಪ್ರಸಿದ್ಧ ॥ 3 ॥
ಅಟ್ಟತಾಳ
ಪಾವಮಾನಿಯಂತೆ ಹರಿವಾಣಾ ವೈ ಬೇಕು
ಗೋವಳರಂತೆ ಎಂಜಲು ಕಲಸಲಿಬೇಕು
ರಾವಣಾನುಜನಂತೆ ನಿನ್ನ ಹೊತ್ತು ತಂದಿಡಬೇಕು
ದೇವನದಿಜನಂತೆ ಕದನ ಮಾಡಲಿ ಬೇಕು
ದೇವತಾ ಗಣದಂತೆ ಭಾರ ಹೊರಿಸಬೇಕು
ಈ ವಿಚಾರವಿರಲು ಆವಲ್ಲಿ ಪೋಗದೆ
ಕಾವುತ್ತಲಿತ್ತ ವರಾವಾದರು ಬೇಡೆ
ದೇವೇಶ ವಿಜಯವಿಟ್ಠಲ ನಿನ್ನ ಮಹಿಮೆಯ
ಆವಾವ ಬಲ್ಲನು ನಮೊ ನಮೊ ನಮೋ ಎಂಬೆ
ಹಾವಿಗೆ ತಡೆ ಬೇರು ಇದ್ದಂತೆ ಇರಬೇಕು ॥ 4 ॥
ಆದಿತಾಳ
ದೂರಿದ ಭಕ್ತರ ದೂರ ಮಾಡುವಿ ಪಾಪ
ದೂರ ಬೇಕು ನಿನ್ನ ದೂರ ಬೇಕು ನಿನ್ನ
ದೂರದಲೆ ಎನ್ನ ದೂರು ಮುಟ್ಟುವದಿಲ್ಲ
ದೂರಿದೆನೆ ಸಿರಿ ವಿಜಯವಿಟ್ಠಲ ವಿ -
ದುರ ವಂದಿತ ಪಾದ ದೂರ ದೋಷ ಬಲು
ದೂರ ನೋಡದೆ ಎನ್ನ ದುರಿತ ಬಿಡಿಸೋ ॥ 5 ॥
ಜತೆ
ಹರನ ಶಿರ ಮುಕುಟ ನಿನ್ನ ಪಾದ ಪೀಠವೊ ರನ್ನ
ಪೊರೆವದು ದಯದಿಂದ ವಿಜಯವಿಟ್ಠಲ ಎನ್ನ ॥