ಶ್ರೀ ವೇಣುಗೋಪಾಲದಾಸಾರ್ಯ ವಿರಚಿತ ಸ್ತೋತ್ರ ಸುಳಾದಿ
(ಭಕ್ತರ ಸಂಗ ವಿನಾ ಸಾಧನ ಬಗೆ ಆಗುವುದಿಲ್ಲ .ಭಕ್ತರ ಸಂಗವೇ ಮುಖ್ಯ)
ರಾಗ : ಭೈರವಿ
ಧ್ರುವತಾಳ
ಏಸೇಸು ಜನುಮಗಳು ಸೂಸಿ ಬಂದರೆ ಏನು
ಕಾಸಾವೀಸಗಳನ್ನು ಬಡೆನೋ ಬಡೆನೋ
ಶ್ರೀಶನಂಘ್ರಿಯ ಸತತ ಸೇವಿಪ ವಿಜಯಾಖ್ಯ
ದಾಸರ ಕರುಣ ವಿಶೇಷವಾಯಿತು ಎನಗೆ
ಆಶಿಯೆ ಮೊದಲಾದ ಅಖಿಳ ಬಂಧಾಂಬುಧಿಯು
ಈಸುವೆ ನಾನು ಇತರ ಕ್ಲೇಶ ಬಡೆನೋ
ಲೇಶವಾದರು ಸಿಲ್ಕಿದಾಚೆಗೆ ಪೋಪೆ ಅಲ್ಲಿ
ತೋಷ ಬಡುವೆ ಹರಿಯ ದಾಸರೊಡನೆ
ಈ ಶರೀರದ ಸುಖ ಲೇಸಾಗಿ ತಿಳಿಯೆ ಮ-
ಹೀಷಿಯ ಕೂಡಿದಹಿ ಸಮೀಪ ತೆರನಂತೆ
ಲೇಸು ತೋರುತಲಿದೆ ಮನವೆ ನೀ ಕೇಳು ಮತ್ತೆ
ಘಾಸೆಯಲ್ಲಡೆ ಒಂದು ಕಾಸಿನ ಲಾಭವಿಲ್ಲ
ದೋಷ ವಿದೂರ ನಮ್ಮ ವೇಣುಗೋಪಾಲನಂಘ್ರಿ
ಶಾಶ್ವತ ನೆನವಿಲಿ ನೀ ಸೇರು ಭಕ್ತರೊಳಗೆ ॥೧॥
ಮಟ್ಟತಾಳ
ದೇಶ ಆಳುವುದಿಲ್ಲ ಕೋಶ ಘಳಿಸಿ ಇಲ್ಲ
ದಾಸಿ ದಾಸರ ಪೋಷಣೆ ಮಾಡುವದಿಲ್ಲ
ಸಾಸಿರವನು ವಂಚಿಸದೆ ಸದನವಿಲ್ಲ
ಸೂಸಿದ ಸುಖವಿಲ್ಲ ಶೇಷು ಪಾಶಗಳಿಲ್ಲಾ
ಈಸುವದ್ಯಾತಕೆ ವಿಷಯಗಳೊಳು ಬಿದ್ದು
ಭೂಸುರ ಜನ್ಮವು ದುರ್ಲಭವೋ
ನಾಶರಹಿತ ನಮ್ಮ ವೇಣುಗೋಪಾಲನ್ನ
ದಾಸರ ಪಾದದಲಿ ವಾಸವಾಗು ಬೇಗ ॥೨॥
ತ್ರಿವಿಡಿತಾಳ
ಜನನಿ ಅನುಜಾಗ್ರಜರು ಜನುಮ ಜನುಮದಿ ನಿನಗೆ
ಘನವಾಗಿ ಅತ್ತೆಲ್ಲಿ ಇದ್ದಿಲ್ಲವೇ
ಮನವೇ ಸತಿ ನಿನಗೆ ಅನಿಮಿತ್ಯಳೆಂದು
ಕನಸಿನಲ್ಯಾದರು ಕನಿಕರಿಸದಿರು
ತನು ಸಂಬಂಧಿಗಳಿವರು ನೆನೆದುಕೊ ನಿನ್ನೊಳಗ
ಅನುದಿನ ಕೇಳಿ ಕೇಳಿ ದಣಿದೆಯಲ್ಲ
ಹನುಮ ವಂದಿತ ನಮ್ಮ ವೇಣುಗೋಪಾಲನ್ನ
ಅನುಸರಿಸಿ ಇರುತಿಹರ ಸೇರು ಅನುಮಾನ ಸಲ್ಲ ॥೩॥
ಅಟ್ಟತಾಳ
ಸಾಸಿರ ದೇಶವು ಸಾಸಿರ ಕಾಲವು
ಸಾಸಿರ ಪಾತ್ರರು ಈಸು ಒಂದಿನ ಕೂಡೆ
ಆಶೆ ಬಿಡದೆ ಪೂಜೆ ಏಸು ಮಾಡಿದರೇನು
ಮೀಸಲ ಮನದಿಂದ ಶ್ರೀಶಗರ್ಪಿಸದಲೆ
ಕಾಶಿಯೆ ಮೊದಲಾದ ದೇಶ ತಿರುಗಿವನ
ವಾಸಿಯಾದರೇನು ಲೇಶವೊಲಿಯ ಹರಿ
ವಾಸುದೇವ ನಮ್ಮ ವೇಣುಗೋಪಾಲನ್ನ
ದಾಸರ ತೋಂಡರ ದಾಸನಾಗದವ ॥೪॥
ಆದಿತಾಳ
ಭಕ್ತಿ ಜ್ಞಾನ ವೈರಾಗ್ಯಾಸಕ್ತನಾಗಿ ಇರುತ ಪರಮಾ
ಭಕ್ತರಾದ ಜನರಿಂದ ವ್ಯಕ್ತಿ ಉಕ್ತಿ ಭುಕ್ತನಾಗಿ
ಶುಕ್ತಿ ರಜತ ತೋರಿದಂತೆ ಉಕ್ತಿ ನಾನು ಎಂಬುದೆಂದು
ಶಕ್ತಿಯಿಂದ ನೆನೆದು ಸರ್ವಾಸಕ್ತಿಯನ್ನು ಕಡಿಯಬೇಕು
ಮುಕ್ತ ವಂದ್ಯ ಚರಣ ವೇಣುಗೋಪಾಲನ್ನ
ಭಕ್ತ ಸಂಗ ಸೇರು ಈ ದುರಕ್ತವನ್ನು ಜ್ಯಾರು ಮನವೆ ॥೫॥
ಜತೆ
ಭಕುತರೊಳಿರುವಂಥ ಸುಖವಿಲ್ಲಾ ಸುಜನಂಗೆ
ಲಕುಮಿವಲ್ಲಭ ವೇಣುಗೋಪಾಲ ವೊಲಿದಂಗೆ ॥೬॥
********