ಹರಿಪಾದವಿರಲಿಕ್ಕೆ ಪರದೈವಂಗಳಿಗೆರಗಲೇಕೆ ||ಪ||
ವರಮಾಣಿಕವಿದ್ದು ಎರವಿನ ಒಡವೆಯ ಬಯಸಲೇಕೆ ||ಅ||
ಪೆತ್ತ ಪಿತನ ಮಾತು ಕಿವಿಯಲಿ ಕೇಳದ ಪುತ್ರನೇಕೆ
ಚಿತ್ತಪಲ್ಲಟವಾಗಿ ತಿರುಗುವ ಸತಿಯನ ಸಂಗವೇಕೆ
ಉತ್ತಮ ಗುರುವನು ನಿಂದನೆ ಮಾಡುವ ಶಿಷ್ಯನೇಕೆ
ಶಕ್ತಿಹೀನನಾಗಿ ಸರ್ವ ಜನರ ಕೂಡೆ ಕ್ರೋಧವೇಕೆ ||
ಭಾಷೆಯ ಕೊಟ್ಟು ತಪ್ಪುವ ಪ್ರಭುವಿನೊಳಾಸೆಯೇಕೆ
ಕಾಸಿಗೆ ಕಷ್ಟಪಡುವ ಲೋಭಿಯ ಗೆಳೆತನವೇಕೆ
ವೇಶ್ಯೆಯ ನೆಚ್ಚಿ ತನ್ನ ನಾರಿಯ ಬಿಡುವಂಥ ಪುರುಷನೇಕೆ
ಹಾಸಿಗೆರಿಯತು ಕಾಲ ನೀಡಲರಿಯದ ಮನುಜನೇಕೆ ||
ಚೆನ್ನಾಗಿ ಬಾಳ್ದು ಪುಣ್ಯವ ಮಾಡದ ಮನುಜನೇಕೆ
ಸನ್ನುತ ವಿದ್ಯವ ಮೆಚ್ಚಲರಿಯದ ಅರಸನೇಕೆ
ಅನ್ನವನಿಟ್ಟು ಹಂಗಿಸುತಿರುವರ ಬಾಳದೇಕೆ
ಉನ್ನತ ಪುರಂದರವಿಠಲನ ನೆನೆಯದ ಜನುಮವೇಕೆ ||
****
ರಾಗ ಸೌರಾಷ್ಟ್ರ ಅಟತಾಳ (raga, taala may differ in audio)