Showing posts with label ಬಾರಯ್ಯ ಬೇಗ ಶ್ರೀ ಶ್ರೀನಿವಾಸ ಭಕ್ತರ ನುಡಿಗೆ gopalakrishna vittala. Show all posts
Showing posts with label ಬಾರಯ್ಯ ಬೇಗ ಶ್ರೀ ಶ್ರೀನಿವಾಸ ಭಕ್ತರ ನುಡಿಗೆ gopalakrishna vittala. Show all posts

Monday 2 August 2021

ಬಾರಯ್ಯ ಬೇಗ ಶ್ರೀ ಶ್ರೀನಿವಾಸ ಭಕ್ತರ ನುಡಿಗೆ ankita gopalakrishna vittala

ಬಾರಯ್ಯ ಬೇಗ ಶ್ರೀ ಶ್ರೀನಿವಾಸ

ಭಕ್ತರ ನುಡಿಗೆ ಪ.


ಬಾರೋ ನಿನ್ನ ಮುಖ ತೋರೊ ತ್ವರಿತದಲಿ

ಸಾರಸಾಕ್ಷ ನಿನ್ನ ಸಾರಿದೆನಯ್ಯ ಅ.ಪ.


ವೈಕುಂಠದಿಂದ ಬಂದೆಯೊ ಗಿರಿಗೆ | ಲಕ್ಷ್ಮಿಯು ತಾ ಪೋಗೆ

ಬೇಕಾಗಲಿಲ್ಲವೊ ಅರಮನೆ ನಿನಗೆ | ಮುನಿಗಳ ವರದನಿಗೆ

ಬೇಕಾದ್ವೈಭವ ನೀ ಕೈಕೊಳುತ

ಸಾಕುತಲಿಪ್ಪೆಯೊ ನೀ ಕರೆದವರನು 1

ಶ್ರೀಸ್ವಾಮಿ ಪುಷ್ಕರಣಿಯ ದಡದಲ್ಲಿ | ನೀ ವಾಸಿಸುತಲ್ಲಿ

ಸೇವಾದಿಗಳನು ಬಗೆಬಗೆ ಕೊಳ್ಳುತಲಿ | ಸುಜನರ ಪೊರೆಯುತಲಿ

ಈ ವಿಧದಿಂದಲಿ ಭಾವಜನಯ್ಯನೆ

ಪಾವಕಸಖನೊಳು ಪಾವನನಾಗಿಹೆ 2

ವರ್ಣಿಸಲರಿಯೆ ನಿನ್ನನು ದೊರೆಯೆ | ಲೋಕದಿ ಅಚ್ಚರಿಯೆ

ಘನ್ನ ಸುಮಹಿಮನೆ ಬೇಡುವದರಿಯೆ | ನೀನೆ ಕೈಪಿಡಿಯೆ

ಮುನ್ನ ಮಾಡಿದ ಘನ್ನ ಪಾಪಗಳು

ಇನ್ನಿರಲಾರವೊ ಮನ್ನಿಸಿ ಪೊರೆಯೊ 3

ಜಗಸೃಷ್ಟಿಯಿಂದ ಜೀವರ ಮಾಳ್ಪೆ | ಜೀವರ ಸೃಷ್ಟಿಪೆ

ತ್ರಿಗುಣಾದಿಗಳಿಂದ ತಿರುಗಿಸುತಿರ್ಪೆ | ಕರ್ಮದ ತೆರೆಮಾಳ್ಪೆ

ವಿಗಡ ದೇಹದೊಳು ಬಗೆ ಬಗೆ ದೇವರು

ತಗಲಿ ನಿನ್ನ ಪದನಗಧರ ಕಾಣರೊ 4

ಕಣ್ಣ ಬಿಟ್ಟಿರುವೆ ಬೆನ್ನೊಳೆ ಬೆಟ್ಟವೆ | ಮಣ್ಣ ತಿನುತಿರುವೆ

ಚಿಣ್ಣ ನಿನಗೊಲಿದು ಚಿಣ್ಣನಾಗ್ವೆ | ಬೆನ್ನೊಳು ಪರಶುವೆ

ಹಣ್ಣು ಕೊಟ್ಟವಳಿಗೆ ಒಲಿದು ಗೋಪಿಯರ ಕಾಯ್ದು

ಬಣ್ಣಗೆಟ್ಟು ಹಯವನ್ನೇರಿದೆ5

ಆಕಾಶರಾಯನ ಮಗಳ ತಂದೆ | ಈ ಗಿರಿಯಲಿ ನೀನೆ

ಸಾಕುವ ಬಿರುದು ನಿನ್ನದೆಂದೆ | ನೀ ಕಾಯಲೆಬೇಕೆಂದೆ

ನೂಕಿ ಎನ್ನ ಭವತಾಪನೀಗಲೆ

ಶ್ರೀಕಳತ್ರ ನಿನ್ನ ಭಕ್ತರೊಳಿಡಿಸೊ 6

ಅಪಾರಮಹಿಮ ಅದ್ಭುತಚರಿತ | ಶೇಷಾದ್ರಿಯೊಳ್ ನಿರುತ

ವ್ಯಾಪಾರ ಮಾಡುತ ಗುಪ್ತದೊಳಿರುತ | ನಿಜ ಭಕ್ತಗೆ ಕಾಣುತ್ತ

ಈ ಪರಿ ಅದ್ಭುತ ಚರಿತೆಯ ತೋರುವ

ಗೋಪಾಲಕೃಷ್ಣ ವಿಠ್ಠಲನೆ ನೀ ಕಾಯೊ 7

****