ಹಟ್ಟಿ ಹನುಮನ ಪಾದ ಭಜಿಸೊ ಕಷ್ಟ ತ್ಯಜಿಸೊ ಪ
ಬುದ್ಧ್ಯಾದ್ಯಷ್ಟ ಸಿದ್ಧಿಗಳನ್ನು ಥಟ್ಟನೆ ಘಳಿಸೋ ಅ.ಪ
ಎಷ್ಟು ಬಲವಂತನೊ ಈತ ಗಿರಿಯ
ಮೆಟ್ಟಿ ಹಾರಿದ ಸಮುದ್ರವ ಕಪಿನಾಥ
ಕೊಟ್ಟು ಮುದ್ರಿಕೆಯನು ಸೀತಾದೇವಿ
ಗಷ್ಟು ರಾಮಗೆ ಪೇಳಿದನು ಕ್ಷೇಮವಾರ್ತಾ 1
ಕುಂತಿಯ ಜಠರ ಸಂಭೂತ ಕೌರ
ವಾಂತಕನೆನಿಸಿದ ಬಹು ಬಲವಂತ
ಶಾಂತ ಕಿರಣಕುಲಜಾತ ಮಾತು
ಲಾಂತಕನೊಲಿಸಿದ ದ್ರೌಪದಿ ಕಾಂತಾ 2
ಮೇದಿನಿಯೊಳು ಮಧ್ವರಾಯಾರೆನಿಸಿ
ಭೇದಮತವ ಸ್ಥಾಪಿಸಿದ ಯತಿವರ್ಯ
ವೇದವಿನುತ ಶುಭಚರಿಯಮನವೆ
ಶ್ರೀದ ಕಾರ್ಪರ ನರಹರಿಗತಿಪ್ರಿಯ3
****