ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ (ವಾಸುದೇವವಿಟ್ಠಲ ಅಂಕಿತ)
ಶ್ರೀಹರಿ ಸ್ವತಂತ್ರ ಸುಳಾದಿ
ರಾಗ ಭೈರವಿ
ಧ್ರುವತಾಳ
ಸಿರಿಯ ಪತಿಯೆ ನೀನು ಅಜನ ಪಿತನೊ ನೀನು
ಸುರರೊಡಿಯನು ನೀನು ಧೊರೆಗಳ ಧೊರೆ ನೀನು
ನರ ಭಕುತರೊಳು ಮರುಳ ಭಕುತ ನಾನು
ಪರಿಪಾಲಿಪದೆಂತೊ ಎನ್ನಾಳುತನವನು
ಸುರರಾಳಿದ ಎನ್ನ ತಪ್ಪುಗಳೆಣಿಸಲು
ಕುರುಬನ ಮಡ್ಡತನ ಚತುರರೆಣಿಸಿದಂತೆ
ಮರುಳರಾದರು ಎಮ್ಮ ಡಿಂಗರಿಗರೆಂದು
ಪರಿಪಾಲಿಸಬೇಕೊ ವಾಸುದೇವವಿಟ್ಠಲ ॥ 1 ॥
ಮಟ್ಟತಾಳ
ಒಡೆಯ ಕ್ಷಮಿಸಿ ನೀ ಕೇಳಿದರಾಯಿತೆ
ನುಡಿಯ ಭಕುತನ್ನ ಅಪರಾಧಗಳು
ಒಡಿಯನು ಪಿಡಿದರೆ ನಡೆನುಡಿಗಳು ತಪ್ಪೆ
ಕಡೆ ಹಾಯುವದೆಂತೊ ಬಡ ಭಕುತರುಗಳು
ಜಡಮತಿ ಜನರನ್ನ ಕಡು ದಯದಿಂದಲ್ಲಿ
ಪಡಿಯಬೇಕು ವಾಸುದೇವವಿಟ್ಠಲ ॥ 2 ॥
ತ್ರಿವಿಡಿತಾಳ
ನಿನ್ನ ಭಕುತರ್ಗೆ ಬನ್ನ ಬರಲು ಉದಾ -
ಸಿನ್ನ ಮಾಡಿದರೆಂಬಿ ಎನ್ನ ನಿರ್ದಯನೆಂದು
ಮುನ್ನಿದಾರೋ ಎಂಬಿ ನಿನ್ನಾರೊ ಬಾ ಎಂದರೊ
ಎನ್ನ ಗೊಡಿವಿ ಏನೊ ಎನ್ನ ಎನ್ನವನೆಂದೇ
ನಿನ್ನವರವರಲ್ಲಿ ಭಿಡಿಯ ಎನಗೆ
ಮುನ್ನೆ ಬೇಕಾದರೆ ಜನರ ವಿಷಯದಲ್ಲಿ
ಸನ್ನೆ ಮಾಡಿದರೆ ಆಂದಕೆ ನಾ ಪಿಡಿವೆನೊ
ನಿನ್ನ ಶರಣರಲ್ಲೆ ಬಿನ್ನಪ ಬಿಡಲೊಲ್ಲೆ
ಘನ್ನ ವಾಸುದೇವವಿಟ್ಠಲ ತಿಳಿದುಕೊ ॥ 3 ॥
ಅಟ್ಟತಾಳ
ಚಲಿಸಲು ತೃಣ ಸಹ ಶಕುತಿ ಎನಗಿಲ್ಲ
ಕಲಿಸಲು ಬಲ್ಲನೆ ವೇದಶಾಸ್ತ್ರಗಳನು
ಒಲಿಸಿ ನಿಲ್ಲಿಪಿನೆ ವಾದಿಗಳ ಸಭೆಗಳಲ್ಲಿ
ಒಲಿಯಲಾರಿಯೆ ನಿನ್ನ ಗುಣಗಣ ನಿಲಯನೆ
ನಿಲಿಸಿ ನಿನ್ನಯ ರೂಪ ನೀನೇವೆ ಮಾಡಿಪಿ
ಒಲಿಯೆ ಮಾತ್ರವನ್ನು ನೀನೇವೆ ವಿಧಿನಿಷೇಧಂಗಳ
ತಲಿಗೆ ಕಟ್ಟುವೆ ಎನ್ನ ನಿನಗಿದು ಉಚಿತವೆ
ಬಲಿಯ ಪಾಶದಿಂದ ಬಿಡಿಸಿದ ತ್ವರ ಎನ್ನ
ಕಲಿಬಾಧೆ ಪರಿಯಯ್ಯಾ ವಾಸುದೇವವಿಟ್ಠಲ ॥ 4 ॥
ಆದಿತಾಳ
ಸೂಚಿಸಿದೆ ನೀ ಮೊದಲೆನಗೆ
ಯೋಚಿಸಿ ನಿನ್ನಯ ವಿಸ್ಮೃತಿ ಮೊದಲಾದ
ನೀಚ ಗುಣಂಗಳ ಗಣಗಳು ಅದರೊಳು
ಚಾಚಲು ಕಾಮ್ಯಕೆ ಹಾನಿಯು ಇನಿತಿಲ್ಲ
ನೀ ಚಿತ್ತದಲ್ಲಿಡು ವಾಸುದೇವವಿಟ್ಠಲ ॥ 5 ॥
ಜತೆ
ನಿನ್ನ ಮರಹೆ ಮೃತ್ಯು ನಿನ್ನ ನೆನಹೆ ಜೀವ
ಧನ್ಯರಿಗಿದೆ ತತ್ವ ವಾಸುದೇವವಿಟ್ಠಲ ॥
****