Showing posts with label ಎಲ್ಲಿರುವೆಯೊ ಎಂದು ತಲ್ಲಣಗೊಳುತ್ತಿದ್ದೆ gopalakrishna vittala. Show all posts
Showing posts with label ಎಲ್ಲಿರುವೆಯೊ ಎಂದು ತಲ್ಲಣಗೊಳುತ್ತಿದ್ದೆ gopalakrishna vittala. Show all posts

Sunday 1 August 2021

ಎಲ್ಲಿರುವೆಯೊ ಎಂದು ತಲ್ಲಣಗೊಳುತ್ತಿದ್ದೆ ankita gopalakrishna vittala

ಎಲ್ಲಿರುವೆಯೊ ಎಂದು | ತಲ್ಲಣಗೊಳುತ್ತಿದ್ದೆ

ಇಲ್ಲೆ ಬಂದೆಯೊ ದೇವನೆ ಪ.


ಪುಲ್ಲಲೋಚನ ಎನ್ನ ಉಲ್ಲಾಸಗೊಳಿಸುತ

ನಿಲ್ಲೊ ಹೃತ್ಕಮಲದಿ ನೀ ಬಹು ಮುದದಿ ಅ.ಪ.


ಕಪಟನಾಟಕ ದೇವ | ಅಪರಿಮಿತ ಮಹಿಮ

ಗುಪಿತರೂಪನೆ ನಿನ್ನನು

ವಿಪುಲಮತಿಯಿಂದ ವರ್ಣಿಸಲಾಪೆನೆ

ಸಪುತ ಸಪುತ ಭುವನೇಶ ಕೃಪೆಮಾಡೊ

ಕೃಪಣವತ್ಸಲ ನಿನ್ನ ಕಾಣದೆ

ಅಪರಿಮಿತವಾಗಿ ನೊಂದೆನಯ್ಯ

ತಪಿಸುವುದು ನಿನಗುಚಿತವೆ ಹರಿ

ಕೃಪೆ ಮಾಡೊ ಬೇಗ ಶ್ರೀನಿವಾಸ 1

ಹರಿ ನಿನ್ನ ಪಾದವ | ನಿರುತದಿ ಧ್ಯಾನಿಪ

ವರಮತಿ ಎನಗೆ ನೀಡೊ

ಗರುವಿಕೆಯನೆ ಬಿಡಿಸು ಶರಣಳ ಪೋಷಿಸು

ಸುರವರ ನಿನ್ನಂಘ್ರಿಗೆರಗಿ ಬಿನ್ನೈಸುವೆ

ಕರೆಕರೆಗೊಳಿಸುವುದುಚಿತವೆ

ತೊರೆದರೆ ಎನ್ನ ಪೊರೆವರ್ಯಾರೊ

ಥರವಲ್ಲ ನಿನಗಿನ್ನು ಕೇಳಿದು

ಪೊರೆಯದಿದ್ದರೆ ನಗರೆ ಭಕ್ತರು 2

ಮಂದಮತಿಯಿವಳೆಂದು | ಹಿಂದು ಮಾಡಿದರÉನ್ನ

ಕುಂದು ನಿನಗೆ ತಪ್ಪದೊ

ಬಂಧನ ಬಿಡಿಸು ನೀ ಬಂಧನದೊಳಗಿಡು

ಮಂದಿರ ಹೃದಯದಿ ಎಂದೆಂದಿಗಗಲದೆ

ಮಂದರೋದ್ಧರ ಕೇಳಿಸಿತೆ ಈ

ಮಂದಭಾಗ್ಯೆಯ ಮಾತು ಕಿವಿಗೆ

ಮಂದಗಮನೆಯ ಮಧ್ಯೆ ಇರುವಗೆ

ಮಂದಹಾಸ ಮುಖೇಂದು ವದನನೆ 3

ಅಜಸುರ ವಂದ್ಯನೆ | ಭಜಿಸಲಾಪೆನೆ ನಿನ್ನ

ತ್ರಿಜಗದೊಡೆಯ ಹರಿಯೆ

ವಿಜಯಸಾರಥಿ ಎನ್ನ ರಜತಮವನೆ ಕಳೆದು

ಕುಜನರೊಳಿಡದಲೆ ನಿಜಗತಿ ಪಾಲಿಸೊ

ಗಜವರದ ಗಂಭೀರ ದೇವನೆ

ಧ್ವಜವಜ್ರೌಕುಶ ಪಾದಕಮಲನೆ

ಭಜಿಸಿದವರಿಗೊಲಿವ ದೇವನೆ

ಭುಜಗಭೂಷಣನಿಂದ ವಂದ್ಯನೆ 4

ಸೃಷ್ಟ್ಯಾದಿ ಕರ್ತನೆ | ಎಷ್ಟು ಬೇಡಲೊ ನಾನು

ಇಷ್ಟ ದೈವÀವೆ ಕೇಳಲೊ

ಭ್ರಷ್ಟತನವನೆಣಿಸದೆ

ದೃಷ್ಟಿಯಿಂದಲಿ ನೋಡಿ

ಕಷ್ಟಬಿಡಿಸಿದರೆ ಮುಟ್ಟಿಪೂಜಿಸುವೆನೊ

ದಿಟ್ಟ ಗೋಪಾಲಕೃಷ್ಣವಿಠ್ಠಲ

ಇಷ್ಟು ಬಿನ್ನಪ ನಷ್ಟ ಮಾಡದೆ

ಕೊಟ್ಟು ಧೈರ್ಯವ ಮೆಟ್ಟಿ ಪಾಪವ

ಸುಟ್ಟು ಕರ್ಮವ ಕೃಷ್ಣ ಸಲಹೊ 5

****