Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ವಿಷ್ಣುಪಾದ ಸುಳಾದಿ
ರಾಗ ನಾಟಿಕುರಂಜಿ
ಧ್ರುವತಾಳ
ಜಗವೆಲ್ಲಾ ವ್ಯಾಪಿಸಿದ ಬಲು ಅತೀಂದ್ರಿಯ ಪಾದ
ಪಗೆಗಳ ಮಸ್ತಕಾದ್ರಿಗೆ ವಜ್ರಪ್ರಹರ ಪಾದ
ಝಗಝಗಿಸುವ ಪರಮ ಮಂಗಳ ಖಣಿಯ ಪಾದ
ನಿಗಮಾವಳಿಗೆ ಇದು ನಿಲುಕದ ಪಾದ
ಅಗಣಿತ ಗುಣಪೂರ್ಣ ಸೌಮ್ಯ ಪಾದ
ತ್ರಿಗುಣಾತೀತವಾದ ಶೃಂಗಾರನಿಧಿ ಪಾದ
ಗಗನ ನದಿಯ ಪೆತ್ತ ಗಂಭೀರ ಪಾದ
ಖಗರಾಜನ ದಿವ್ಯ ಪೆಗಲಲ್ಲಿ ಪೊಳೆವ ಪಾದ
ಯುಗಯುಗದಲ್ಲಿ ಇಲ್ಲಿ ಪೂಜೆಗೊಂಬುವ ಪಾದ
ಬಗೆ ಬಗೆ ವರಗಳ ಕೊಡುವ ಪಾದ
ಮಿಗೆ ಸಹಾಸವುಳ್ಳ ಮಿಸಣಿಯಾಭರಣ ಪಾದ
ಅಘದೂರ ಪಾದ ಅತಿಚಿತ್ರ ಪಾದ
ನಗವೈರಿನುತ ನಮ್ಮ ವಿಜಯವಿಠ್ಠಲ ಪ -
ನ್ನಗಶಾಯಿಯ ಪಾದ ವಿಷ್ಣುಪಾದ ॥ 1 ॥
ಮಟ್ಟತಾಳ
ಧರ್ಮ ಶಿಲಿಯ ಮೇಲೆ ಮೆರೆವ ಮಣಿಯ ಪಾದ
ಕರ್ಮ ಖಂಡನೆ ಮಾಳ್ಪ ಕಲುಷ ವಿಗತ ಪಾದ
ಕರ್ಮವರ್ಮ ಮರ್ಮ ಕರ್ಮ ಸಂಗದ ಪಾದ
ಪೇರ್ಮೆಯುನ್ನತವಾದ ಪ್ರೇಮಭರಿತ ಪಾದ
ಕೂರ್ಮರೂಪ ನಮ್ಮ ವಿಜಯವಿಠ್ಠಲರೇಯನ
ಧರ್ಮ ಮೂರುತಿಯ ಪಾದ ಸಿರಿಪಾದ ॥ 2 ॥
ತ್ರಿವಿಡಿತಾಳ
ದಹರಾಕಾಶದಲ್ಲಿ ಮಿಂಚುವ ಘನಪಾದ
ಬಹುಗಮನವಾಗಿದ್ದ ಭಾಗ್ಯ ಪಾದ
ಅಹೋರಾತ್ರಿಯಲಿ ಬಿಡದೆ ಆನಂದದ ಪಾದ
ಮಹ ಪುಣ್ಯ ತಂದೀವ ಮಂತ್ರ ಪಾದ
ದ್ರೋಹಿ ಮಾನವರಿಗೆ ದೂರವಾದ ಪಾದ
ಗಹನವಾದ ಪಾದ ಗುಪ್ತಪಾದ
ಸ್ನೇಹಭಾವದಿಂದ ಸಾಕುವ ನಿಧಿ ಪಾದ
ರಾಹಸ್ಯವಾಗಿ ಜಪಿಸುವ ಪಾದ
ತ್ರಾಹಿ ತಾವರೆನಯನ ವಿಜಯವಿಠ್ಠಲ ಸರಸಿ -
ರೂಹ ಪೋಲುವ ಪಾದ ಆರ್ಜವ ಪಾದ ॥ 3 ॥
ಅಟ್ಟತಾಳ
ಅಸುರಗಯನ ಶಿರದಲ್ಲಿ ನಿಂದ ಪಾದ
ಎಸೆವ ಹದಿನೆಂಟು ಪಾದದೊಳಿಪ್ಪ ಪಾದ
ಶಶಿಮುಖಿ ಗೋಪೇರ ಮನಕೆ ಮೋಹನ ಪಾದ
ವಶವಾಗಿ ಭಕ್ತರ ಬಳಿಯಲಿಪ್ಪ ಪಾದ
ವಿಷ ವರ್ಜಿತ ವಿಲಕ್ಷಣ ಪಾದ
ಬೆಸನೆ ಲಾಲಿಸಿ ಲಾಲನೆ ಮಾಡುವ ಪಾದ
ಅಸಮದೈವ ನಮ್ಮ ವಿಜಯವಿಠ್ಠಲರೇಯಾ
ಪೆಸರಾದ ಪಾದ ಪರಮ ಸೌಖ್ಯ ಪಾದ ॥ 4 ॥
ಆದಿತಾಳ
ಎಲ್ಲರಿಂದಲಿ ಪಿಂಡ ಹಾಕಿಸಿಕೊಂಬ ಪಾದ
ಮಲ್ಲ ಮೊದಲಾದವರ ಖಳರ ಜೈಸಿದ ಪಾದ
ಮೆಲ್ಲಮೆಲ್ಲನೆ ಶುದ್ಧ ಸ್ತೋತ್ರ ಕೈಕೊಂಬ ಪಾದ
ಸಲ್ಲಲಿತ ಪಾದ ಸರ್ವ ಸೌಕಾರ್ಯ ಪಾದ
ಎಲ್ಲೆಲ್ಲಿ ನೋಡಿದರೂ ವ್ಯಕ್ತವಾದ ಪಾದ
ಬಲ್ಲಿದ ಹರಿ ನಮ್ಮ ವಿಜಯವಿಠ್ಠಲರೇಯ
ವಲ್ಲಭನ ಪಾದ ವಜ್ರಾಂಕಿತ ಪಾದ ॥ 5 ॥
ಜತೆ
ಫಲ್ಗುಣಿ ತೀರದಲಿ ಮೆರೆವ ಮಹತ್ತು ಪಾದ
ಫಲ್ಗುಣ ಸಾರಥಿ ವಿಜಯವಿಠ್ಠಲನ ಪಾದ ॥
**********