kruti by ಜಾನಕಿರಮಣ
ರಾಗ: ಜಂಜೂಟಿ ತಾಳ: ಆದಿ
ಇಳೆಯೊಳು ಗುರು ರಾಘವೇಂದ್ರರ ಭಜಿಸಲು
ಕಲುಷರಾಸಿಗಳು ತೊಲಗುವವೋ ಪ
ಏಳನೂರು ಸಂವತ್ಸರಕಾಲವು
ಸುಲಭದಿ ಭಕುತರ ಸಲಹುವರೋ ಅ. ಪ
ಒಂದೇಮನಸಿಲಿ ಬೃಂದಾವನದಿ
ಹದವನರಿತು ಸೇವೆಸಾಧಿಸಲು
ಮುಂದಿನ ಮುಕುತಿಗೆ ಸಾಧನವಾಗುವ
ಹಾದಿಯ ತೋರಲು ಒದಗುವರು 1
ವರಮಂತ್ರಾಲಯ ಬೃಂದಾವನದಿ ಸ-
ಶರೀರದಲಿ ಕುಳಿತಿರುವ
ಪರಿಪರಿವಿಧದಲಿ ಸೇವಿಪ ಭಕುತರು
ಕೋರಿದ ವರಗಳ ಕರುಣಿಸುವ 2
ಗುರುಸುಧೀಂದ್ರರ ಕರಸಂಜಾತರು
ಶರಣಾಗತರನುದ್ಧರಿಸುವರು
ಸಿರಿಯರಸ ಶ್ರೀಜಾನಕಿರಮಣನ
ತೋರಲು ಬರುವರು ಕರದೆಡೆಗೆ 3
***