ರಾಗ – : ತಾಳ –
ಬಿಡುವೋ ದಿಲ್ಲೋ ರಂಗಾ ಬಿಡುವೋದಿಲ್ಲೋ ll ಪ ll
ಬಡಿದು ನಮ್ಮಾ ದವ ನೀನು l
ಕೊಡದೆ ಪೋಗುವುದೆಲ್ಲೋ ll ಅ ಪ ll
ನೀರ ಮುಣುಗಿ ಭಾರ ಪೊತ್ತು, ಬೇರ ತಿಂದು
ಘೋರ ಬ್ರಹ್ಮಚಾರಿ ನೃಪರ ಸಂಹಾರಿ, ಧನು
ರ್ಧಾರಿ, ಗೋಕುಲ ಶೌರಿ, ಬತ್ತಲೆ, ವಾಜಿ
ನೇರಿ ನಡೆದರೂ ನಿನ್ನಾ ll ೧ ll
ಮಡುವು ಧುಮುಕಿ, ಬಿಡಿಯಗಣ್ಣು, ಪೊಡವಿ ಕೆದರಿ,
ಒಡೆದು ಕಂಭ, ಹುಡುಗನೆನಿಸಿ, ಕೊಡಲಿ ಧರಿಸಿ
ಕಡಲ ದಾಟಿ, ತುಡುಗನಾಗಿ, ಮಡದೀಯರ
ಕೆಡಿಸಿ, ವಾಜಿಯೊಡೆಯನಾದರೂ ನಿನ್ನಾ ll ೨ ll
ಸೋತು ಮೀನ ಜಾತಿ ಕೂರ್ಮ ಭೂತ, ಸಿಂಹ
ಪೋತ ನೃಪರ ಘಾತ, ರವಿಕುಲ ಜಾತ, ಗೋಕುಲ
ನಾಥ, ಪುರಸತಿ ಘಾತ ಕಲಹ
ಪ್ರೀತ ಗುರುಜಗನ್ನಾಥವಿಟ್ಠಲ ನಾದರೂ ಸರಿ ll ೩ ll
***