Audio by Mrs. Nandini Sripad
ಶ್ರೀ ವಿಜಯದಾಸಾರ್ಯ ಕೃತ ನಿಜಭಕ್ತರು ಪ್ರವರ್ತಿಸುವ ಪದ್ಧತಿ ಸುಳಾದಿ
ರಾಗ ಕೇದಾರಗೌಳ
ಧ್ರುವತಾಳ
ಯಾಕೆ ಜೀವನವೆ ವಿವೇಕಮತಿ ಸಾಲದೆ
ಲೋಕದೊಳು ಎನ್ನ ದೂರುವದೇನೋ
ಸಾಕುವ ನೃಪತಿ ಸೇವಕರಿಗೆ ಸಂಬಳ
ಬೇಕಾದ ನಿತ್ತು ನೀಯೆ ತಡಮಾಡದೆ
ವಾಕು ಪೇಳಲು ನಿರಾಕರಿಸಿದರೆ
ಪಾತಕವಾವರಿಗೆ ಬಾರದೇನೊ
ತಾ ಕಾಲೂರದೆ ಬಿದ್ದು ಭೂಮಿಯ ಬೈದ ಅವಿ -
ವೇಕನಂತೆ ನೀನು ಬಾಳೋರೇನೊ
ನೈಕಕರ್ಮಕೃತು ವಿಜಯವಿಠ್ಠಲಗೆ ನೀ
ಬೇಕಾದವನೆ ನಾ ಬೇಕಾಗದವನೆ ॥ 1 ॥
ಮಟ್ಟತಾಳ
ಬಲ್ಲಿದ ರಾವುತನು ಇಲ್ಲದೆ ಇರಲು
ಹಲ್ಲಣಕ್ಕೆ ವಾಜಿ ನಿಲ್ಲುವದೇನೊ
ಎಲ್ಲ ಕಾಲದಲಿ ನಿನ್ನಲ್ಲಿ ದೃಢವಿರೆ
ಸೊಲ್ಲು ಉಲ್ಲಂಘಿಸಲು ಸಲ್ಲುವದೆ ಎನಗೆ
ಪುಲ್ಲಶರನಯ್ಯ ವಿಜಯವಿಠ್ಠಲ ಮಾರ್ಗ
ಎಲ್ಲರಿಗೆ ದಯದಲ್ಲಿ ತೋರಿ ಕೊಡುವ ॥ 2 ॥
ತ್ರಿವಿಡಿತಾಳ
ಉತ್ತಮರನು ಕಂಡು ಎತ್ತಿ ಕರಗಳ ಮುಗಿಯೊ
ಚಿತ್ತದಲ್ಲಿ ಪಾಪದತ್ತ ಪೋಗದಿರು
ತೊತ್ತು ವಾರ್ತಿಗೆ ಕಿವಿಯಿತ್ತು ಕೇಳದಿರು
ಸೋತ್ತಮರ ಕೂಡ ಪುಶಿಯಾಡದಿರು
ಆತ್ಮಸ್ತುತಿಯ ಬಿಡು ಎತ್ತದಿರು ಪರರ ನಿಂದೆ
ತೊತ್ತು ಬಡಕರಿಗೆ ತತ್ವ ಉಸರದಿರು
ಜಿತಮನ್ಯು ವಿಜಯವಿಠ್ಠಲನ್ನ ಚರಣ ಪಠಿ -
ಸುತ್ತಲಿದ್ದರೆ ನಾನೆತ್ತ ಪೋಗೆನೊ ಜೀವಾ ॥ 3 ॥
ಅಟ್ಟತಾಳ
ಹಿಂದೆ ನೀನು ಸುಮ್ಮನೆ ನಿಂದು ಇರಲಾಗಿ
ಇಂದಿರಾರಮಣನು ತಂದು ನಮ್ಮನ್ನೆಲ್ಲ
ಪೊಂದಿಸಿ ಕೊಡಲಾಗಿ ಅಂದು ಮೊದಲು ನೀ
ನೊಂದು ಸಾಧನದಿಂದ ಬೆಲೆಗಾಂಬೀ
ಇಂದ್ರಕರ್ಮನಾಮ ವಿಜಯವಿಠ್ಠಲ ಬೇ -
ಡೆಂದರೆ ನಿಲ್ಲವು ಒಂದು ದಿನಾದರೂ ॥ 4 ॥
ಆದಿತಾಳ
ಹಾದರ ಬೇಡೆಂಬೊ ಗರ್ತಿ ಮಾದಿಗನ್ನ ಪೋದಂತೆ
ಓದು ಕಲಿತ ಪಂಡಿತ ಏಕಾದಶಿಲಿ ಉಂಡಂತೆ
ನೀ ಧಾರಾಳವಾಗಿರದೆ ಪೋದವು ಇಂದ್ರಿಯಗಳೆಂದು
ಬೀದಿ ಬೀದಿ ದೂರಿದೂರಿ ತೋದ ವಸ್ತ್ರವಾಗದಿರು
ವೇದಾತ್ಮನಾಮ ವಿಜಯವಿಠ್ಠಲನ್ನ ಲೀಲಾ ಸ -
ತ್ಪಾದವನು ನಂಬೆ ಸರ್ವಸಾಧನಕ್ಕೆ ಅನುಕೂಲ ॥ 5 ॥
ಜತೆ
ಸಕಲರೊಂದಾಗಿ ಸಂಗ್ರಹ ವಿಜಯವಿಠ್ಠಲನ್ನ
ಭಕುತರೆಂದೆನಿಸಿ ವಿಮುಕುತಿಲಿ ಸುಖಬಡುವ ॥
*****************